ಇಸ್ಲಾಂ ಬಾಂಗ್ಲಾದ ಅಧಿಕೃತ ಧರ್ಮವಾಗಿ ಉಳಿಯುವುದೇ? ಮಾರ್ಚ್ 27ರಂದು ಹೈಕೋರ್ಟ್‌ನಲ್ಲಿ ವಿಚಾರಣೆ

ಢಾಕಾ, ಮಾ. 8: ಬಾಂಗ್ಲಾದೇಶದ ಸರಕಾರಿ ಧರ್ಮವಾಗಿ ಇಸ್ಲಾಂನ್ನು ಕೈಬಿಡುವ ಕಾನೂನು ಪ್ರಕ್ರಿಯೆಗೆ 28 ವರ್ಷಗಳ ಬಳಿಕ ಮರುಜೀವ ನೀಡಲಾಗಿದೆ. ಈ ತಿಂಗಳ ಉತ್ತರಾರ್ಧದಲ್ಲಿ ಪ್ರಕರಣದ ವಿಚಾರಣೆ ನಡೆಸಲು ದೇಶದ ಹೈಕೋರ್ಟ್ ಒಪ್ಪಿದೆ.
1971ರಲ್ಲಿ ಜಾರಿಗೆ ಬಂದ ಬಾಂಗ್ಲಾದೇಶದ ಸಂವಿಧಾನವು ಮೂಲತಃ ಎಲ್ಲ ಧರ್ಮಗಳನ್ನು ಸರಕಾರದ ದೃಷ್ಟಿಯಲ್ಲಿ ಸಮಾನ ಎಂಬುದಾಗಿ ಘೋಷಿಸಿತ್ತು. ಆದಾಗ್ಯೂ, ಸೇನಾ ಆಡಳಿತಗಾರ ಮುಹಮ್ಮದ್ ಇರ್ಶಾದ್ 1988ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು, ಇಸ್ಲಾಮನ್ನು ಸರಕಾರಿ ಧರ್ಮವನ್ನಾಗಿಸಿದರು.
ಈ ತಿದ್ದುಪಡಿಯನ್ನು ರದ್ದುಪಡಿಸುವಂತೆ ಕೋರಿ 12 ನಾಗರಿಕರ ಗುಂಪೊಂದು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿತು. ಆದರೆ, ಪ್ರಕರಣವನ್ನು ಮುಂದುವರಿಸದಿರಲು ಸದಸ್ಯರು ನಿರ್ಧರಿಸಿದ್ದಾರೆ ಎಂದು ಗುಂಪನ್ನು ಸ್ಥಾಪಿಸಿದ್ದ ಶಹರ್ಯಾರ್ ಕಬೀರ್ ಬಳಿಕ ಹೇಳಿದರು.
‘‘ನ್ಯಾಯಪೀಠವು ನಮ್ಮ ಪರವಾಗಿ ಇರುವುದಿಲ್ಲ ಎಂಬುದನ್ನು ನಾವು ಅರಿತುಕೊಂಡೆವು. ಹಾಗಾಗಿ, ಪ್ರಕರಣದಲ್ಲಿ ಮುಂದುವರಿಯದಿರಲು ನಿರ್ಧರಿಸಿದೆವು’’ ಎಂದು ಶಹರ್ಯಾರ್ ಸೋಮವಾರ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದರು.
ಬಳಿಕ, ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಹಾಲಿ ಸರಕಾರ ಮತ್ತೊಮ್ಮೆ ಸಂವಿಧಾನಕ್ಕೆ ತಿದ್ದುಪಡಿ ತಂದಿತು. ಸರಕಾರ ಜಾತ್ಯತೀತತೆಯ ತತ್ವಗಳನ್ನು ಪುನಃಸ್ಥಾಪಿಸಿತು ಹಾಗೂ ಅದೇ ವೇಳೆ, ಸರಕಾರದ ಧರ್ಮವಾಗಿ ಇಸ್ಲಾಂನ್ನು ದೃಢೀಕರಿಸಿತು.
ಈ ವಿರೋಧಾಭಾಸವನ್ನು ನಿವಾರಿಸುವಂತೆ ಶಹರ್ಯಾರ್‌ರ ಗುಂಪು ಹಾಲಿ ಮನವಿಯಲ್ಲಿ ನ್ಯಾಯಾಲಯವನ್ನು ಕೋರಿದೆ. ಮಾರ್ಚ್ 27ರಂದು ಪ್ರಕರಣದ ವಿಚಾರಣೆ ನಡೆಯಲಿದೆ.







