ಪತ್ರಕರ್ತನಿಗೆ ಕೊಲೆ ಬೆದರಿಕೆ ಹಾಕಿದ ಆರ್ಟ್ ಆಫ್ ಲಿವಿಂಗ್ ಅನುಯಾಯಿಗಳು
" ತುಮ್ಹಾರಾ ಭೀ ಕಲ್ಬುರ್ಗಿ ಹೋಗಾ "

ಹೊಸದಿಲ್ಲಿ , ಮಾ .8: ಇಲ್ಲಿನ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ( ಎನ್ ಜಿ ಟಿ) ಕಚೇರಿ ಹೊರಗಡೆ ಪತ್ರಕರ್ತರೊಬ್ಬರಿಗೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ನ ಸದಸ್ಯರು ಅಥವಾ ಅನುಯಾಯಿಗಳು ಎನ್ನಲಾದ ಇಬ್ಬರು ಸಾರ್ವಜನಿಕವಾಗಿಯೇ ಕೊಲೆ ಬೆದರಿಕೆ ಒಡ್ಡಿದ ಆಘಾತಕಾರಿ ಘಟನೆ ವರದಿಯಾಗಿದೆ.
ಎನ್ ಜಿ ಟಿ ಯಲ್ಲಿ ವಿಚಾರಣೆಗಾಗಿ ಬಂದಿದ್ದ ಇಬ್ಬರು ಆರ್ಟ್ ಆಫ್ ಲಿವಿಂಗ್ ಅನುಯಾಯಿಗಳು ವಿಮಲೆಂದು ಅವರಿಗೆ ಪತ್ರಕರ್ತರು ಹಾಗು ಸಾರ್ವಜನಿಕರ ಎದುರೇ ಕೊಲೆ ಬೆದರಿಕೆ ಹಾಕಿದ್ದಾರೆ. ಮಾತ್ರವಲ್ಲ " ತುಮ್ಹಾರಾ ಭೀ ಕಲ್ಬುರ್ಗಿ ಹೋಗಾ ( ನಿನ್ನದೂ ಕಲ್ಬುರ್ಗಿ ಆಗಲಿದೆ ) " ಎಂದು ಹೇಳಿದ್ದಾರೆ. ಈ ಬಗ್ಗೆ ವಿಮಲೆಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.
ಪತ್ರಕರ್ತ ವಿಮಲೆಂದು ಝಾ ಅವರು ಆರ್ಟ್ ಆಫ್ ಲಿವಿಂಗ್ ನಿಂದ ಯಮುನಾ ನದಿ ದಂಡೆಯಲ್ಲಿ ಮಾರ್ಚ್ ೧೧ರಿಂದ ನಡೆಯಲಿರುವ ಬೃಹತ್ ವರ್ಲ್ಡ್ ಕಲ್ಚರ್ ಫೆಸ್ಟಿವಲ್ ಕುರಿತ ವಿವಾದಗಳ ಬಗ್ಗೆ ಸವಿವರವಾದ ಪ್ರತ್ಯಕ್ಷದರ್ಶಿ ವರದಿಗಳನ್ನು ಬರೆದಿದ್ದರು. ಸುಮಾರು ೩೫ ಲಕ್ಷ ಜನ ಸೇರುವ ನಿರೀಕ್ಷೆ ಇರುವ ಈ ಕಾರ್ಯಕ್ರಮಕ್ಕಾಗಿ ಆರ್ಟ್ ಆಫ್ ಲಿವಿಂಗ್ ಮಾಡುತ್ತಿರುವ ಬೃಹತ್ ಕಾಮಗಾರಿಗಳು ಹಾಗು ಕಾಂಕ್ರೀಟ್ ನಿರ್ಮಾಣಗಳಿಂದಾಗಿ ಇಡೀ ಯಮುನಾ ನದಿ ಪ್ರದೇಶದ ಪರಿಸರಕ್ಕೆ ಭಾರೀ ಹಾನಿ ಉಂಟಾಗಿದೆ ಎಂದು ಪರಿಸರವಾದಿಗಳು ದೂರಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಲು ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ( ಎನ್ ಜಿ ಟಿ) ನಿಯೋಜಿಸಿದ್ದ ಸಮಿತಿ ಅಲ್ಲಿಗೆ ಭೇಟಿ ನೀಡಿದ ಬಳಿಕ ಆರ್ಟ್ ಆಫ್ ಲಿವಿಂಗ್ ಮಾಡಿರುವ ಹಾನಿಗೆ ದಂಡವಾಗಿ ಅದರಿಂದ 120 ಕೋಟಿ ರೂಪಾಯಿ ವಸೂಲಿ ಮಾಡಬೇಕೆಂದು ಶಿಫಾರಸು ಮಾಡಿತ್ತು. ಈ ಎಲ್ಲ ವಿಷಯಗಳ ಕುರಿತು ವಿಮಲೆಂದು ಸವಿವರವಾಗಿ ವರದಿ ಮಾಡಿದ್ದರು. ಕಾರ್ಯಕ್ರಮ ನಡೆಯಲಿರುವ ಸ್ಥಳಕ್ಕೆ ಭೇಟಿ ನೀಡಿದ ವಿಮಲೆಂದು ಚಿತ್ರ ಸಹಿತ ಆರ್ಟ್ ಆಫ್ ಲಿವಿಂಗ್ ಕಾಂಕ್ರೀಟ್ ನಿರ್ಮಾಣಗಳ ಕುರಿತು ಸುಳ್ಳು ಹೇಳುತ್ತಿದೆ ಎಂದು ವರದಿ ಮಾಡಿದ್ದರು.





