ಬಂಟ್ವಾಳ; ಎನ್‌ಡಬ್ಲ್ಯೂಎಫ್‌ನಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಬಂಟ್ವಾಳ, ಮಾ. 8: ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ನ್ಯಾಷನಲ್ ವುಮೆನ್ಸ್ ಫ್ರಂಟ್ ರಾಷ್ಟ್ರಾಧ್ಯಂತ ನಡೆಸುತ್ತಿರುವ "ಸಾಮಾಜಿಕ ಬದಲಾವಣೆಯ ಬೀಜ ಬಿತ್ತೋಣ" ಎಂಬ ಅಭಿಯಾನದ ಅಂಗವಾಗಿ ತಾಲೂಕು ಸಮಿತಿ ವತಿಯಿಂದ ಮಂಗಳವಾರ ಬಿ.ಸಿ.ರೋಡು ತಾಲೂಕು ಕಚೇರಿ ಮುಂಭಾಗದಲ್ಲಿ ಮಹಿಳಾ ಜಾಗೃತಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ನ್ಯಾಷನಲ್ ವುಮೆನ್ಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯೆ ಝೀನತ್ ಗೂಡಿನಬಳಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಬಹಳಷ್ಟು ಹಿಂದುಳಿದಿದ್ದಾರೆ. ಶೇ. 50ರಷ್ಟು ಮಂದಿ ಅನಕ್ಷರಸ್ಥರಲ್ಲಿ ಸಿಂಹಪಾಲು ಮಹಿಳೆಯರಾಗಿದ್ದಾರೆ ಎಂದು ಹೇಳಿದ ಅವರು, ಎಲ್ಲ ಕ್ಷೇತ್ರದಲ್ಲೂ ಮಹಿಳೆಯರ ಹಿಂದುಳಿಯುವಿಕೆ ದಾರಿದ್ರ್ಯ ಮೂಲ ಕಾರಣವಾಗಿದ್ದು, ಆದ್ದರಿಂದ ಮಹಿಳೆಯರ ಕಲ್ಯಾಣಕ್ಕೆ ಸರಕಾರಗಳು ಮುಂದಾಗಬೇಕಾಗಿದೆ ಎಂದರು. ದೇಶದಲ್ಲಿ ದಿನನಿತ್ಯ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಮಹಿಳೆಯರಲ್ಲಿ ಅಭದ್ರತೆಯ ಆತಂಕ ಮೂಡುತ್ತಿದೆ. ಮಹಿಳೆಯ ರಕ್ಷಣೆಗೆ ಕಠಿಣ ಕಾಣೂನು ಹಾಗೂ ಅವರ ಕಲ್ಯಾಣಕ್ಕಾಗಿ ಸೂಕ್ತ ಯೋಜನೆಗಳನ್ನು ಸರಕಾರಗಳು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷೆ ಸಲೀಕಾ ತುಂಬೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬಂಟ್ವಾಳ ಪುರಸಭೆ ಸದಸ್ಯೆ ಮುಮ್ತಾರ್ ಬಿ.ಸಿ.ಲತೀಫ್ ಮೊದಲಾದವರು ಉಪಸ್ಥಿತರಿದ್ದರು. ಸಾಜಿದಾ ಪರ್ಲಿಯಾ ಸ್ವಾಗತಿಸಿದರು, ಸಂಶಾದ್ ಪರ್ಲಿಯಾ ವಂದಿಸಿದರು. ಆಯಿಷಾ ತುಂಬೆ ನಿರೂಪಿಸಿದರು.





