‘ಬಿ-ಟ್ರಾಕ್’ ಸಂಚಾರ ವ್ಯವಸ್ಥೆ ಇತರ ನಗರಗಳಿಗೂ ವಿಸ್ತರಣೆ: ಸಚಿವ ಡಾ.ಪರಮೇಶ್ವರ್

ಬೆಂಗಳೂರು, ಮಾ.8: ಸಂಚಾರ ವ್ಯವಸ್ಥೆಯನ್ನು ನಿರ್ವಹಣೆ ಮಾಡುವ ಉದ್ದೇಶದಿಂದ ಬೆಂಗಳೂರಿನಲ್ಲಿರುವ ‘ಬಿ-ಟ್ರಾಕ್’ ಮಾದರಿ ಯನ್ನು ರಾಜ್ಯದ ಇತರ ಪ್ರಮುಖ ನಗರ ಗಳಲ್ಲಿಯೂ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಸಾಂತ್ವನ-ಹರೀಶ್ ಯೋಜನೆಯ ಮಾಹಿತಿ ಕೈ ಪಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಬೆಂಗಳೂರಿನಲ್ಲಿ ಕಳೆದ ವರ್ಷ 750 ಮಂದಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ವಾಹನ ಚಾಲನೆಯಲ್ಲಿನ ಸ್ವಲ್ಪ ಅಜಾಗರೂಕತೆ ತಮ್ಮ ಅಥವಾ ಮತ್ತೊಬ್ಬರ ಪ್ರಾಣಕ್ಕೆ ಕಂಟಕವಾಗಬಹುದು ಎಂಬುದನ್ನು ಯಾರು ಮರೆಯಬಾರದು. ಆದುದರಿಂದ, ವಾಹನ ಚಾಲನೆ ಸಂದರ್ಭದಲ್ಲಿ ಅತೀ ಹೆಚ್ಚು ಎಚ್ಚರಿಕೆಯನ್ನು ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಬೆಂಗಳೂರಿನಲ್ಲಿ 60 ಲಕ್ಷ ವಾಹನಗಳಿವೆ. ಪ್ರತಿ ತಿಂಗಳು ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದಕ್ಕೆ ನಿಯಂತ್ರಣ ಹೇರುವ ಅಗತ್ಯವಿದೆ. ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಜಾರಿಗೆ ತಂದಿರುವ ‘ಬಿ-ಟ್ರಾಕ್’ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದ್ದು, ರಾಜ್ಯದ ಇತರ ಪ್ರಮುಖ ನಗರಗಳಿಗೂ ವಿಸ್ತರಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.
ಪೊಲೀಸ್ ಠಾಣೆ, ನ್ಯಾಯಾಲಯಗಳ ಭಯದಿಂದಾಗಿ ಸಾರ್ವಜನಿಕರು, ಅಪಘಾತಗಳು ಸಂಭವಿಸಿದಾಗ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಹಿಂದೇಟು ಹಾಕುತ್ತಾರೆ. ಆದುದರಿಂದ, ಆಸ್ಪತ್ರೆಗಳು ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು. ಇಂತಹ ಯೋಜನೆ ಜಾರಿಗೆ ತರುತ್ತಿರುವ ಮೊದಲ ರಾಜ್ಯ ನಮ್ಮದು ಎಂಬುದು ಶ್ಲಾಘನೀಯ ಎಂದು ಪರಮೇಶ್ವರ್ ನುಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ ಎಂಬ ಧ್ಯೇಯ ದೊಂದಿಗೆ ನಮ್ಮ ಸರಕಾರ ಮುಂದುವರಿಯುತ್ತಿದೆ. ಎಪಿಎಲ್ ಹಾಗೂ ಬಿಪಿಎಲ್ ಕುಟುಂಬಗಳಿಗೆ ಆರೋಗ್ಯ ರಕ್ಷಣೆ ಒದಗಿಸಿರುವ ಏಕೈಕ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ರಾಜ್ಯದ ಗಡಿಯೊಳಗೆ ಹಾದು ಹೋಗುವ ಯಾವುದೇ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಅಥವಾ ಇತರೆ ರಸ್ತೆಗಳಲ್ಲಿ ಅಪಘಾತಕ್ಕೊಳಗಾದ ಯಾವುದೆ ವ್ಯಕ್ತಿ (ರಾಜ್ಯದ, ಯಾವುದೇ ರಾಜ್ಯ ಅಥವಾ ದೇಶದ ವ್ಯಕ್ತಿಯಾಗಿರಲಿ)ಗಳಿಗೆ ಗುರುತಿಸಲ್ಪಟ್ಟ ಹಾಗೂ ಅತಿ ಹತ್ತಿರದ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಒದಗಿಸಲು ಈ ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಮುಖ್ಯಮಂತ್ರಿಗಳ ಸಾಂತ್ವನ ಯೋಜನೆಯು ಜಾರಿಗೊಳ್ಳುವ ಮೂಲಕ ದೇಶದಲ್ಲೇ ಇಂತಹ ಒಂದು ಮಹತ್ವದ ಹಾಗೂ ಅಪೂರ್ವ ಯೋಜನೆಯನ್ನು ಅನುಷ್ಠಾನಗೊಳಿಸಿದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ ಎಂದು ಖಾದರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ಪಾಟೀಲ್, ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ದೇವಿಶೆಟ್ಟಿ, ಬಿಬಿಎಂಪಿ ಸದಸ್ಯ ಆರ್.ವಸಂತ್‌ಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ, ಆಯುಕ್ತ ಪಿ.ಎಸ್.ವಸ್ತ್ರದ್, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕ ಡಾ.ಬೋರೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಬಿ.ಟ್ರ್ಯಾಕ್ ಎಂದರೆ...
ಜಂಕ್ಷನ್‌ಗಳನ್ನು ಅಭಿವೃದ್ಧಿಪಡಿಸುವುದು, ಆ ಜಂಕ್ಷನ್‌ಗಳಲ್ಲಿ ಕಣ್ಗಾವಲು ಕ್ಯಾಮರಾಗಳನ್ನು ಅಳವಡಿಸುವುದು, ವಿಡಿಯೊ ವಾಲ್ ನಿರ್ಮಾಣ ಮಾಡುವುದು, ಸಿಬ್ಬಂದಿಗೆ ಮೊಬೈಲ್ ಫೋನ್ ನೀಡುವುದು, ಆ ಮೂಲಕ ನಗರದ ಮುಖ್ಯ ರಸ್ತೆಗಳಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಸಹಾಯವಾಗುತ್ತದೆ.





