ಒಂದು ದಿನದ ಆಚರಣೆ ನಮಗೆ ಬೇಕಿಲ್ಲ
ಮಾನ್ಯರೆ,
ವಿಶ್ವದಾದ್ಯಂತ್ಯ ಕೇವಲ ಮಾರ್ಚ್ 8 ರಂದು ಮಾತ್ರ ಮಹಿಳೆಯರು ಪುರುಷರ ಸಮಾನವಾಗಿ ಬದುಕಲು ಯೊಗ್ಯರು ಎಂಬುದು ನೆನಪಾಗುತ್ತದೆ. ಉಳಿದ ದಿನಗಳೆಲ್ಲ ಮಹಿಳೆಯರ ಅಥವಾ ಯುವತಿಯರಿಗೆ ತಮಗಿರುವ ಹಕ್ಕುಗಳೇ ನೆನಪಾಗದಂತೆ ಪುರುಷ ಪ್ರಧಾನ ಸಾಮ್ರಾಜ್ಯ ಹತೋಟಿ ಸಾಧಿಸಿರುತ್ತದೆ. ಪ್ರತಿನಿತ್ಯ ಮಹಿಳೆಯನ್ನ್ನು ಎರಡನೆ ದರ್ಜೆಯ ಪ್ರಜೆಯಾಗಿ ಕಾಣುವ ಪುರುಷರೇ ಮಾರ್ಚ್ 8ರಂದು ಮಾತ್ರ ಮಹಿಳೆಯರ ಪರವಾಗಿ ಉದ್ದುದ್ದ ಭಾಷಣ ಬಿಗಿಯುತ್ತಾರೆ. ಎಲ್ಲವೂ ಪ್ರಚಾರಕ್ಕಾಗಿ, ನಿಜವಾಗಿಯೂ ಮಹಿಳೆಯರ ಮೇಲೆ ಗೌರವವಿದ್ದರೆ ಪ್ರತಿ ನಿತ್ಯ ಮಹಿಳೆಗೆ ಯಾವುದೇ ತರಹದ ಹಿಂಸೆ ಕೊಡದೆ ಅವಳೊಂದಿಗೆ ಇದ್ದರೆ ಸಾಕು, ಅದು ಬಿಟ್ಟು ನಿತ್ಯವೂ ಹಿಂಸೆ ನೀಡಿ ಮಾರ್ಚ್ 8 ರಂದು ಮಾತ್ರ ಮಹಿಳೆಯರ ಹಕ್ಕುಗಳನ್ನು ಕುರಿತು ಚರ್ಚಿಸಿದರೆ ಫಲವಿಲ್ಲ. ನಮಗೆ ಹಕ್ಕಗಳನ್ನು ಕೊಡಲು ಪುರುಷರು ಯಾರು? ಅವರು ನಮ್ಮಂತೆ ಮಾನವರೇ ತಾನೆ, ಮೊದಲು ನಮ್ಮನ್ನು ನಮ್ಮಷ್ಟಕ್ಕೆ ಬದುಕಲು ಬಿಡಲಿ ಅಷ್ಟೇ ಸಾಕು. ನಮಗೆ ಒಂದು ದಿನ ಮಾತ್ರ ಬಿಟ್ಟು ಉಳಿದೆಲ್ಲ ದಿನ ಹಿಂಸೆ ನೀಡುತ್ತಿರುವಾಗ ಈ ದಿನಾಚರಣೆಗೆ ಅರ್ಥವಾದರೂ ಏನು?





