ಇದೇನು ದೇಶ ಪ್ರೇಮವೇ?
ಮಾನ್ಯರೆ,
ದೇಶದ ದುರ್ಗಮ ಗಡಿ ಕಾಯುತ್ತಾ ಹುತಾತ್ಮರಾದ ಸೈನಿಕರ ಕುಟುಂಬದವರನ್ನು ಸನ್ಮಾನಿಸುವಾಗ ಸರಕಾರದವರೇ ಆಗಲಿ ಅಥವಾ ಯಾವುದೇ ಖಾಸಗಿ ಸಂಘಸಂಸ್ಥೆಗಳೇ ಆಗಲಿ ಆ ಹುತಾತ್ಮ ಸೈನಿಕನ ಮನೆಗೇ ಹೋಗಿ ಆ ಕುಟುಂಬದ ಸದಸ್ಯರ ಎದುರಿಗೆ ಹುತಾತ್ಮನ ಪತ್ನಿ ಅಥವಾ ಹೆತ್ತವರನ್ನು ಸನ್ಮಾನಿಸುವುದು ಜಗತ್ತಿನಲ್ಲೆಲ್ಲಾ ನಡೆದು ಬಂದಿರುವ ಶಿಷ್ಟಾಚಾರ. ಸೈನಿಕ ಹುತಾತ್ಮನಾಗಿ ಕೇವಲ 1 ದಿನದೊಳಗೆ ಆ ಸೈನಿಕನ ಪತ್ನಿಯನ್ನು 30ಕಿ.ಮೀ.ದೂರ ಕರೆದುಕೊಂಡು ಹೋಗಿ ಅಲ್ಲಿ ನಗರದ ಬೀದಿ ಬೀದಿಗಳಲ್ಲಿ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿ ಅವಳಿಗೆ ಒಂದು ಅಗ್ಗದ ಶಾಲು ಹೊದೆಸಿ ಭಾಷಣ ಬರೆದುಕೊಟ್ಟು ಅವಳಿಂದ ಭಾಷಣ ಮಾಡಿಸಿ ಆ ದುರ್ದೈವಿ ಮಹಿಳೆಯ ದುಖವನ್ನು ಇನ್ನೂ ಹೆಚ್ಚಿಸುವ ಮೂರ್ಖತನ ತೋರುವುದಲ್ಲ.
ಆದರೆ ಕಳೆದ ವಾರ ತಥಾಕಥಿತ ದೇಶ ಭಕ್ತರಾದ ಮಂಗಳೂರಿನ ಹಿಂದುತ್ವ ಪಡೆಗಳು ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆಯ ಹುತಾತ್ಮ ಸೈನಿಕ ಮಹೇಶರ ಪತ್ನಿ ಆಶಾರನ್ನು ಅವರ ಭಾರೀ ದುಖದ ನಡುವೆಯೂ ಅವರಿಗೆ ಏನೇನೋ ಅಮಿಷ ತೋರಿಸಿ ದೂರದ ಮಂಗಳೂರಿಗೆ ಕರೆತಂದು ತೆರೆದ ಟೆಂಪೋದಲ್ಲಿ ಯಾವುದೋ ನಕಲಿ ಸ್ವಾಮಿಯ ಕಾಲ ಹತ್ತಿರ ಕೂಡಿಸಿ, ಕೇಸರಿ ಬಟ್ಟೆ ಉಡಿಸಿ ನಗರವಿಡೀ ಮೆರವಣಿಗೆ ಮಾಡಿ ಆ ಬಡ ಹೆಂಗಸಿಗೆ ಅಪಾರ ಮಾನಸಿಕ ಹಿಂಸೆ ಕೊಟ್ಟು ತಾವು ಮಹಾ ದೇಶಭಕ್ತರಂತೆ ಪೋಸ್ ಕೊಟ್ಟಿದ್ದಾರೆ. ಹಿಂದುತ್ವ ಪಡೆಗಳೊಳಗಿನ ನಕಲಿ ದೇಶಪ್ರೇಮಿಗಳು ತಮ್ಮ ಮನೆಯ ಯುವಕರನ್ನು ಹುತಾತ್ಮ ಮಹೇಶನಂತೆ ಸೇನಾಪಡೆಯಲ್ಲಿ ಭರ್ತಿಗೊಳಿಸಿ ದೇಶಕ್ಕಾಗಿ ಪ್ರಾಣ ಅರ್ಪಿಸುತ್ತೇವೆ ಎಂದು ಅಪ್ಪಿತಪ್ಪಿಯೂ ಈ ಸಾರ್ವಜನಿಕ ಹಿಂದುತ್ವ ಸಭೆಯಲ್ಲಿ ಪ್ರಮಾಣ ಮಾಡಲಿಲ್ಲ.ಹಾಗಾದರೆ ಇವರ ದೇಶಭಕ್ತಿಯ ನಾಟಕಕ್ಕೆ ಯಾವ ಅರ್ಥವಿದೆ? ತಮ್ಮ ವಿಶ್ವಾಸಿ -ಅಭಿಷೇಕ್ .ಪಡಿವಾಳ್ ಸುಳ್ಯ







