ಗೋಶಾಲೆಗೆ ಜಾನುವಾರು ಸಾಗಿಸುತ್ತಿದ್ದ ಲಾರಿಗೆ ಸಂಘಪರಿವಾರ ಕಾರ್ಯಕರ್ತರಿಂದ ದಾಳಿ
ಚಾಲಕ ಸಹಿತ ಮೂವರಿಗೆ ಹಲ್ಲೆ: ಏಳು ಮಂದಿ ಸೆರೆ, 7 ಬೈಕ್ ವಶ

ಕುಂದಾಪುರ, ಮಾ.8: ಪರವಾನಿಗೆಯೊಂದಿಗೆ ಜಾನುವಾರುಗಳನ್ನು ಗೋ ಶಾಲೆಗೆ ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಚಾಲಕನ ಸಹಿತ ಮೂವರಿಗೆ ಹಲ್ಲೆ ನಡೆಸಿರುವ ಘಟನೆ ತಲ್ಲೂರು ಸೇತುವೆ ಬಳಿ ಮಂಗಳವಾರ ಅಪರಾಹ್ನ 1ಗಂಟೆ ಸುಮಾರಿಗೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರಾದ ತಲ್ಲೂರಿನ ಕಿರಣ್ ದೇವಾಡಿಗ, ಹೆಮ್ಮಾಡಿಯ ಮಂಜುನಾಥ್ ಶೆಟ್ಟಿ, ಗೋಪಾಲ ಪೂಜಾರಿ, ರಾಘವೇಂದ್ರ ಮೊಗವೀರ, ಕೊಲ್ಲೂರಿನ ಕೃಷ್ಣ ಪೂಜಾರಿ, ಕಟ್ ಬೆಲ್ತೂರಿನ ಚಂದ್ರಶೇಖರ್ ಭಟ್, ಹಕ್ಲಾಡಿಯ ಬಾಲಕೃಷ್ಣ ಎಂಬವರನ್ನು ಬಂಧಿಸಿರುವ ಪೊಲೀಸರು, ಏಳು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರಿನ ದೇರಳಕಟ್ಟೆಯ ಕೃಷಿಕ ಅನಂತ ಕಾಮತ್‌ರ ಗೋಶಾಲೆಗೆ ಮಹಾರಾಷ್ಟ್ರ ಪೂನಾದ ಶಿರವಿ ಸಮಾಜ ಗೋ ಶಾಲೆಯಿಂದ ಖರೀದಿಸಲಾಗಿದ್ದ 11 ಹಸು ಮತ್ತು ಗೂಳಿ, ಎರಡು ಕರು ಸೇರಿ ಒಟ್ಟು 13 ಗೀರ್ ತಳಿಯ ಜಾನುವಾರುಗಳನ್ನು ಪೂನಾ ಗೋಶಾಲೆಯ ಮ್ಯಾನೆಜರ್ ವಸಂತ್ ಕುಮಾರ್ ಮಾ.7ರಂದು ತಮಿಳುನಾಡಿನ ರಘು ಎಂಬವರ ಆಂಧ್ರಪ್ರದೇಶ ನೋಂದಣಿಯ ಲಾರಿಯಲ್ಲಿ ಮಂಗಳೂರಿಗೆ ಪರವಾನಿಗೆ ಸಹಿತ ಸಾಗಾಟ ಮಾಡುತ್ತಿದ್ದರು.
ಮಾ.8ರಂದು ಲಾರಿಯು ತಲ್ಲೂರು ಸೇತುವೆ ಬಳಿ ಬರುತ್ತಿದ್ದಾಗ ಹಿಂದಿನಿಂದ ಸುಮಾರು 15 ಬೈಕ್‌ಗಳಲ್ಲಿ ಆಗಮಿಸಿದ 25ರಿಂದ 30ಮಂದಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಲಾರಿಯನ್ನು ತಡೆದು ನಿಲ್ಲಿಸಿದರು. ವಸಂತ ಕುಮಾರ್‌ರಲ್ಲಿ ಲಾರಿಯಲ್ಲಿ ಏನಿದೆ ಎಂದು ವಿಚಾರಿಸಿದ ಕಾರ್ಯ ಕರ್ತರ ಗುಂಪು ಅವಾಚ್ಯವಾಗಿ ಬೈದರು. ವಸಂತ ಕುಮಾರ್ ಸಂಬಂಧಪಟ್ಟ ದಾಖಲೆಗಳನ್ನು ತೋರಿಸಿದರೂ, ಅದನ್ನು ನೋಡದ ಕಾರ್ಯಕರ್ತರು ರಘು, ಕ್ಲೀನರ್ ರವಿಕುಮಾರ್ ಹಾಗೂ ವಸಂತ್ ಕುಮಾರ್‌ರನ್ನು ಲಾರಿಯಿಂದ ಕೆಳಗೆ ಇಳಿಸಿ ಹಲ್ಲೆಗೈದು ಜೀವ ಬೆದರಿಕೆ ಹಾಕಿದರು.
ಲಾರಿಯನ್ನು ರಸ್ತೆಯಲ್ಲೇ ತಡೆದು ನಿಲ್ಲಿಸಿದ ಪರಿಣಾಮ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಈ ಕುರಿತು ಮಾಹಿತಿ ತಿಳಿದ ಕುಂದಾಪುರ ಡಿವೈಎಸ್ಪಿ ಚಂದ್ರಶೇಖರ್ ಶೆಟ್ಟಿ, ವೃತ್ತ ನಿರೀಕ್ಷಕ ದಿವಾಕರ್, ಕುಂದಾಪುರ ಎಸ್ಸೈ ನಾಸೀರ್ ಹುಸೇನ್, ಅಮಾಸೆಬೈಲು ಎಸ್ಸೈ ಸುನೀಲ್ ಹಾಗೂ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿದರು. ಅಲ್ಲಿ ಈ ವಿಚಾರದಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣ ಗೊಂಡಿತು.
ತಕ್ಷಣ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ದುಷ್ಕರ್ಮಿಗಳನ್ನು ಚದುರಿಸಿದರು. ಸ್ಥಳದಲ್ಲಿದ್ದ ಕೆಲವರನ್ನು ಪೊಲೀಸರು ಬಂಧಿಸಿ, ಬೈಕ್‌ಗಳನ್ನು ವಶ ಪಡಿಸಿಕೊಂಡರು. ಹಲವು ಮಂದಿ ತಪ್ಪಿಸಿಕೊಂಡು ಪರಾರಿಯಾದರು. ಈ ಬಗ್ಗೆ ವಸಂತ್ ಕುಮಾರ್ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





