ಧರ್ಮಶಾಲಾದಲ್ಲಿ ಭಾರತ-ಪಾಕ್ ಪಂದ್ಯ ಅಬಾಧಿತ: ಶ್ರೀಧರ್

ಹೊಸದಿಲ್ಲಿ, ಮಾ.8: ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯ ನಿಗದಿಯಂತೆ ಧರ್ಮಶಾಲಾದಲ್ಲಿ ನಡೆಯಲಿದೆ ಎಂದು ಟೂರ್ನಿಯ ನಿರ್ದೇಶಕ ಎಂ.ವಿ. ಶ್ರೀಧರ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಪಂದ್ಯ ವೇಳಾಪಟ್ಟಿಯಂತೆಯೇ ನಡೆಯುವುದು. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಈ ಪಂದ್ಯಕ್ಕೆ ಸಂಪೂರ್ಣ ಸುರಕ್ಷಾ ವ್ಯವಸ್ಥೆಗಳನ್ನು ಮಾಡಿವೆ ಎಂದು ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ(ಆಂತರಿಕ ಭದ್ರತೆ) ಎಂಕೆ ಸಿಂಗ್ಲಾ ಅವರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಶ್ರೀಧರ್ ತಿಳಿಸಿದ್ದಾರೆ.
ಪಾಕಿಸ್ತಾನ ಮಾ.19 ರಂದು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಭಾರತ ವಿರುದ್ಧ ವಿಶ್ವಕಪ್‌ನ ಸೂಪರ್-10 ಪಂದ್ಯವನ್ನು ಆಡಲಿದೆ. ಮಾಜಿ ಸೈನಿಕರು ಸೇರಿದಂತೆ ಕೆಲವು ಸಂಘಟನೆಗಳಿಂದ ಈ ಪಂದ್ಯಕ್ಕೆ ವಿರೋಧ ವ್ಯಕ್ತವಾಗಿದೆ.
ಪಾಕಿಸ್ತಾನದಿಂದ ಬಂದಿರುವ ಭದ್ರತಾ ತಂಡ ಧರ್ಮಶಾಲಾಕ್ಕೆ ಭೇಟಿ ನೀಡಿದ್ದು, ಸ್ಟೇಡಿಯಂ ಹಾಗೂ ಆಟಗಾರರು ಉಳಿದುಕೊಳ್ಳುವ ಹೊಟೇಲ್‌ಗಳಲ್ಲಿ ಏರ್ಪಡಿಸಿರುವ ಭದ್ರತಾ ವ್ಯವಸ್ಥೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಕಾಂಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಸ್ಥಳೀಯ ಮುಖ್ಯ ಪೊಲೀಸ್ ಇನ್‌ಸ್ಪೆಕ್ಟರ್ ಆಟಗಾರರು ಹಾಗೂ ಸ್ಟೇಡಿಯಂಗೆ ಸಂಪೂರ್ಣ ಭದ್ರತೆ ನೀಡಲಿದ್ದಾರೆ ಎಂದು ಸಿಂಗ್ಲಾ ಹೇಳಿದ್ದಾರೆ.
ಪಾಕಿಸ್ತಾನ ತಂಡ ಧರ್ಮಶಾಲಾ ಸೇರಿದಂತೆ ಮೊಹಾಲಿ(ಮಾ.22 ಹಾಗೂ 25), ಕೋಲ್ಕತಾದಲ್ಲಿ (ಮಾ.16) ವಿಶ್ವಕಪ್ ಪಂದ್ಯವನ್ನು ಆಡಲಿದೆ.







