ಬೃಹತ್ ಸಾಲ ಬಾಕಿ: ಸಂಸದರೂ ಕಡಿಮೆಯೇನಿಲ್ಲ...
ಹೊಸದಿಲ್ಲಿ,ಮಾ.8: ಬ್ಯಾಂಕುಗಳು ರಾಜಕಾರಣಿಗಳು ಸೇರಿದಂತೆ ದೊಡ್ಡ ಸುಸ್ತಿದಾರರ ತಂಟೆಗೆ ಹೋಗುತ್ತಿಲ್ಲವೆಂದು, ‘ಸಾಲದ ದೊರೆ’ಯೆಂಬ ಹಣೆಪಟ್ಟಿಕಟ್ಟಿಕೊಂಡಿರುವ ವಿಜಯ್‌ಮಲ್ಯ ಅವರ ವಕೀಲರು ಆರೋಪಿಸಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ ಕೋಟ್ಯಂತರ ರೂ. ಸಾಲವನ್ನು ಉಳಿಸಿದವರು ವಿಜಯ್ ಮಲ್ಯ ಒಬ್ಬರೇ ಅಲ್ಲ. ಸಂಸತ್‌ನ ಹಾಲಿ ಹಾಗೂ ಮಾಜಿ ಸದಸ್ಯರು ಕೂಡಾ ಬೃಹತ್ ಮೊತ್ತದ ಸಾಲಗಳನ್ನು ಪಾವತಿಸದೆ ಬಿಟ್ಟಿದ್ದಾರೆ. ಈ ಪಟ್ಟಿಯಲ್ಲಿ ಆಂಧ್ರದ ಸಂಸದರು ಮುಂಚೂಣಿಯಲ್ಲಿದ್ದಾರೆ.
2014ರವರೆಗೆ ವಿಶಾಖಪಟ್ಟಣಂನಿಂದ ಕಾಂಗ್ರೆಸ್ ಪಕ್ಷದ ಸಂಸದರಾದ ಲಗಡಾಪತಿ ರಾಜಗೋಪಾಲ್ ಯಾನೆ ಲ್ಯಾಂಕೊ ರಾಜ್‌ಗೋಪಾಲ್, ಭಾರತದ ಅತಿ ದೊಡ್ಡ ಸುಸ್ತಿದಾರರಲ್ಲಿ ಒಬ್ಬರೆನಿಸಿದ್ದಾರೆ. ಅವರ ಒಡೆತನದ ಕಂಪೆನಿಯು ದೇಶದ ವಿವಿಧ ಬ್ಯಾಂಕ್‌ಗಳಿಗೆ 34 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಸಾಲವನ್ನು ಬಾಕಿಯುಳಿಸಿದೆ. ಮೋದಿ ಸರಕಾರದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಖಾತೆಯ ಸಹಾಯಕ ಸಚಿವರಾಗಿರುವ ವೈ.ಎಸ್.ಚೌಧುರಿ ಇನ್ನೋರ್ವ ಸುಸ್ತಿದಾರರಾಗಿದ್ದಾರೆ. ರಾಜ್ಯಸಭೆಯಲ್ಲಿ ಟಿಡಿಪಿ ಸಂಸದರಾಗಿರುವ ಚೌಧುರಿ, ಮಾರಿಷಸ್ ಮೂಲದ ಹೆಸ್ಟಿಯಾ ಹೋಲ್ಡಿಂಗ್ಸ್ ಕಂಪೆನಿಗೆ 106 ಕೋಟಿ ರೂ.ಗಳ ಸಾಲ ಬಾಕಿಯುಳಿಸಿದ್ದಾರೆ.
ಸಾರ್ವಜನಿಕರಂಗದ ಆಂಧ್ರಬ್ಯಾಂಕ್ ಈಗಾಗಲೇ 434 ಕೋಟಿ ರೂ. ಸಾಲ ಪಾವತಿಸದಿರುವ ಟಿಡಿಪಿ ಸಂಸದ ರಾಯಪಟಿ ಸಾಂಬಶಿವರಾವ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಒಂದು ವೇಳೆ ಬ್ಯಾಂಕ್‌ಗಳು ಸಾಲ ಮರುಪಾವತಿಸಲು ವಿಫಲವಾದಲ್ಲಿ ಅವರ ಆಸ್ತಿ ಹರಾಜುಹಾಕುವುದಾಗಿ ಬ್ಯಾಂಕ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ರಾಯಪಟಿ ಒಡೆತನದ ಟ್ರಾನ್ಸ್‌ಟ್ರಾಯ್ ಕಂಪೆನಿ ವಿವಿಧ ಹಣಕಾಸು ಸಂಸ್ಥೆಗಳಿಂದ 1,500 ಕೋಟಿ ರೂ. ಸಾಲ ಪಡೆದಿತ್ತು. ಈಗ ಈ ಸಂಸ್ಥೆಯು ಒಂದು ಸಣ್ಣ ಕಾಮಗಾರಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ಸ್ಥಿತಿಯಲ್ಲಿಲ್ಲ. ಟ್ರಾಸ್‌ಟ್ರಾಯ್‌ಕಂಪೆನಿ ನಿರ್ವಹಿಸುತ್ತಿದ್ದ ಪೊಲಾವರಂ ಅಣೆಕಟ್ಟು ಯೋಜನೆಯನ್ನು ಟಿಡಿಪಿ ಸರಕಾರವು ಇತ್ತೀಚೆಗೆ ಬೇರೊಂದು ಸಂಸ್ಥೆಗೆ ಹಸ್ತಾಂತರಿಸಿದೆ.
ಮಾಜಿ ಕಾಂಗ್ರೆಸ್ ಲೋಕಸಭಾ ಸದಸ್ಯ ವೆಂಕಟರಾಮ ರೆಡ್ಡಿ ಒಡೆತನದ ಡೆಕ್ಕನ್ ಕ್ರಾನಿಕಲ್ ಇನ್ನೊಂದು ಬೃಹತ್ ಸಾಲ ಸುಸ್ತಿದಾರನಾಗಿದೆ. ಪ್ರಸ್ತುತ ಜೈಲಿನಲ್ಲಿರುವ ರೆಡ್ಡಿ ವಿವಿಧ ಬ್ಯಾಂಕ್‌ಗಳಿಗೆ 4 ಸಾವಿರ ಕೋಟಿ ರೂ. ಸಾಲ ಬಾಕಿಯಿರಿಸಿದ್ದಾನೆ. ಬಿಜೆಡಿ ಸಂಸದ ಜಯ್ ಪಂಡಾ ಕುಟುಂಬದ ಒಡೆತನದಲ್ಲಿರುವ ಇಂಡಿಯಾ ಚಾರ್ಜ್ ಕ್ರೋಮ್ ಲಿ. (ಐಸಿಸಿಎಲ್) ಹಾಗೂ ಇಂಡಿಯನ್ ಮೆಟಲ್ಸ್ ಆ್ಯಂಡ್ ಫೆರ್ರೊ ಅಲಾಯ್ಸೊ ದೇಶದ ಟಾಪ್ 20 ಬ್ಯಾಂಕ್ ಸುಸ್ತಿದಾರರಲ್ಲೊಬ್ಬರಾಗಿದ್ದಾರೆ.
ಐಸಿಸಿಎಲ್ ಕಂಪೆನಿಯು ಐಡಿಬಿಐನಿಂದ 2,300 ಕೋಟಿ ರೂ. ಸಾಲ ರಿಯಾಯಿತಿ ಪಡೆದುಕೊಂಡಿತ್ತು.
ಡಿಎನ್‌ಎ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ ದೇಶದಲ್ಲಿ ಪಾವತಿಯಾಗದೆ ಉಳಿದಿರುವ ಶೇ.73ರಷ್ಟು ಸಾಲವು ದೇಶದ ಅತಿ ಶ್ರೀಮಂತರು, ಉದ್ಯಮಿಗಳು ಮತ್ತು ಉನ್ನತ ಮಧ್ಯಮ ವರ್ಗದವರದ್ದಾಗಿದೆ.





