ರಾಮ್‌ದೇವ್ ಫುಡ್‌ಪಾರ್ಕ್ ಕಾವಲಿಗೆ ಅರೆಸೈನಿಕ ಪಡೆ

ಹೊಸದಿಲ್ಲಿ,ಮಾ.8: ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಕಾರ್ಯಕ್ರಮಕ್ಕಾಗಿ ದಿಲ್ಲಿ ಸಮೀಪದ ಯಮುನಾ ನದಿಯಲ್ಲಿ ಸೇನೆಯು ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿ ಕೊಟ್ಟಿರುವುದು ವಿವಾದಕ್ಕೆಡೆ ಮಾಡಿರುವಂತೆಯೇ, ಯೋಗಗುರು ಬಾಬಾರಾಮ್‌ದೇವ್ ಅವರ ಪತಂಜಲಿ ಫುಡ್‌ಪಾರ್ಕ್ ಮಳಿಗೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾಪಡೆ (ಸಿಐಎಸ್‌ಎಫ್) ಯಿಂದ ಭದ್ರತೆಯನ್ನು ಒದಗಿಸಲಾಗಿದೆ.
ಯೋಗಗುರು ಬಾಬಾರಾಮ್‌ದೇವ್ ಅವರ ಫುಡ್‌ಪಾರ್ಕ್ ಮಳಿಗೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾಪಡೆ (ಸಿಐಎಸ್‌ಎಫ್)ಯ ಯೋಧರು ದಿನದ 24 ತಾಸುಗಳ ಕಾಲವೂ ಕಾವಲು ಕಾಯಲಿದ್ದಾರೆ.ಪತಂಜಲಿ ಫುಡ್ ಹಾಗೂ ಹರ್ಬಲ್‌ಪಾರ್ಕ್ ಪ್ರೈ.ಲಿಮಿಟೆಡ್ ಸಂಸ್ಥೆಯು, ಈ ಅರೆಸೈನಿಕ ಪಡೆ ನಿಯೋಜನೆಯ ಸಂಪೂರ್ಣ ವೆಚ್ಚವನ್ನು ಭರಿಸಲಿದೆಯೆಂದು ಸಿಐಎಸ್‌ಎಫ್ ನಿರ್ದೇಶಕ ಜನರಲ್ ಸುರೇಂದರ್‌ಸಿಂಗ್ ಮಂಗಳವಾರ ತಿಳಿಸಿದ್ದಾರೆ.
ಕಳೆದ ವರ್ಷ ಫುಡ್‌ಪಾರ್ಕ್‌ನಲ್ಲಿ ಕಾವಲುಗಾರರು ಹಾಗೂ ಟ್ರಕ್‌ಚಾಲಕರ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಮೃತಪಟ್ಟ ಘಟನೆಯ ಬಳಿಕ, ಸ್ಥಳದಲ್ಲಿ 35 ಮಂದಿ ಸಿಐಎಸ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
2008ರ ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ಸಿಐಎಸ್‌ಎಫ್ ಭದ್ರತೆಯನ್ನು ಪಡೆದಿರುವ ಎಂಟನೆ ಸರಕಾರೇತರ ಸಂಸ್ಥೆ ಇದಾಗಿದೆ.ಬೆಂಗಳೂರು, ಮೈಸೂರು ಹಾಗೂ ಪುಣೆಗಳಲ್ಲಿ ಇನ್ಫೋಸಿಸ್ ಕ್ಯಾಂಪಸ್‌ಗಳು, ಸಿಐಎಸ್‌ಎಫ್ ಭದ್ರತೆಯಿರುವ ಉಳಿದ ಏಳು ಕಂಪೆನಿಗಳಾಗಿವೆ.





