ನನ್ನ ಮುಖ ಬಸ್ತರ್ ಹೋರಾಟವನ್ನು ಪ್ರತಿಬಿಂಬಿಸುತ್ತಿದೆ: ಸೋನಿ ಸೋರಿ

ಹೊಸದಿಲ್ಲಿ, ಮಾ.8: ಕಳೆದ ತಿಂಗಳು ಛತ್ತೀಸ್‌ಗಡದಲ್ಲಿ ಕೆಮಿಕಲ್ ದಾಳಿಗೊಳಗಾದ ಆದಿವಾಸಿ ಹಕ್ಕುಗಳ ಕಾರ್ಯಕರ್ತೆ ಹಾಗೂ ಎಎಪಿ ನಾಯಕಿ ಸೋನಿ ಸೋರಿ ತನ್ನ ಮುಖವು ನಕ್ಸಲ್ ಪೀಡಿತ ಬಸ್ತರ್ ಪ್ರದೇಶದ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಸೋಮವಾರ ಜೆಎನ್‌ಯು ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸೋನಿ ‘‘ನನ್ನನ್ನು ಕೂಡ ನಕ್ಸಲರೊಂದಿಗೆ ನಂಟು ಇದೆಯೆಂಬ ಸುಳ್ಳು ಪ್ರಕರಣದಲ್ಲಿ ಈತನಂತೆ (ಕನ್ಹಯ್ಯಾ) ಜೈಲಿಗಟ್ಟಲಾಗಿತ್ತು. ಜೆಎನ್‌ಯು ಹೋರಾಟದ ಮೂಲಕ ಕನ್ಹಯ್ಯಾನ ಬಿಡುಗಡೆಗೆ ಸಹಕರಿಸಿರುವುದು ನನಗೆ ಸಂತಸ ತಂದಿದೆ’’ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಸೋನಿ ‘‘ಮಹಿಳೆಯರು ಪೊಲೀಸರಿಂದ ಅತ್ಯಾಚಾರಕ್ಕೀಡಾದಾಗ ಏನೂ ಹೇಳದ ಸರಕಾರ, ಈ ಪ್ರಕರಣದಲ್ಲಿ ಎಲ್ಲ ರೀತಿಯ ತಂತ್ರಗಳನ್ನು ಅನುಸರಿಸಿದರೂ ಕನ್ಹಯ್ಯಾನ ವಿರುದ್ಧ ಒಂದೇ ಒಂದು ಸಾಕ್ಷ್ಯವನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ,’’ ಎಂದು ಹೇಳಿ 2011ರಿಂದ ತನ್ನ ಹೋರಾಟಕ್ಕೆ ಬೆಂಬಲವಾಗಿ ನಿಂತ ಜೆಎನ್‌ಯು ವಿದ್ಯಾರ್ಥಿಗಳಿಗೆ ಧನ್ಯವಾದ ಹೇಳಿದರು.
ಸೋನಿಯವರನ್ನು ಕನ್ಹಯ್ಯ ಕಳೆದ ತಿಂಗಳಿಂದೀಚೆಗೆ ಹಲವಾರು ಪ್ರತಿಟನೆಗಳಿಗೆ ಸಾಕ್ಷಿಯಾಗಿರುವ ವಿಶ್ವವಿದ್ಯಾನಿಲಯದ ಆಡಳಿತ ಬ್ಲಾಕ್ ಎದುರು ಸಹ ವಿದ್ಯಾರ್ಥಿಗಳಿಗೆ ಪರಿಚಯಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಸೋನಿಯ ಮೇಲೆ ಕಳೆದ ತಿಂಗಳು ದಾಳಿ ನಡೆದ ನಂತರ ಅಲ್ಲಿನ ವೈದ್ಯರು ಆಕೆಯ ಮೇಲೆ ಪ್ರಯೋಗಿಸಲಾದ ರಾಸಾಯನಿಕವನ್ನು ಪತ್ತೆ ಹಚ್ಚಲು ವಿಫಲವಾದ ನಂತರ ಪಕ್ಷವು ಆಕೆಯನ್ನು ದೆಹಲಿಯ ಆಸ್ಪತ್ರೆಗೆ ಸೇರಿಸಿತ್ತು. ಆದಿವಾಸಿಗಳ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ 44ರ ಹರೆಯದ ಸೋನಿಯನ್ನು ಛತ್ತೀಸ್‌ಗಡ ಪೊಲೀಸರ ಪರವಾಗಿ ದಿಲ್ಲಿ ಪೊಲೀಸರು 2011ರಲ್ಲಿ ಬಂಧಿಸಿ ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದಾರೆಂದು ಆರೋಪಿಸಿದ್ದರು. ಬಂಧನದಲ್ಲಿದ್ದಾಗ ತನ್ನ ಮೇಲೆ ಛತ್ತೀಸ್‌ಗಡ ಪೊಲೀಸರು ಲೈಂಗಿಕ ದೌರ್ಜನ್ಯ ನಡೆಸಿದ್ದರೆಂದು ಸೋನಿ ದೂರಿದ್ದರು. ಎಪ್ರಿಲ್ 2013ರೊಳಗಾಗಿ ಆಕೆಯ ವಿರುದ್ಧ ದಾಖಲಾಗಿದ್ದ ಎಂಟು ಪ್ರಕರಣಗಳಲ್ಲಿ ಆರರಲ್ಲಿ ಆಕೆ ಖುಲಾಸೆಗೊಂಡಿದ್ದರು
ಕನ್ಹಯ್ಯ ಬಂಧನದ ವಿರುದ್ಧ ಜೆಎನ್‌ಯುವಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ವಿದ್ಯಾರ್ಥಿಗಳ ಒಂದು ಗುಂಪು ಸೋನಿ ಸೋರಿ ಮೇಲೆ ನಡೆದ ದಾಳಿಯ ವಿರುದ್ಧವೂ ಪ್ರತಿಭಟಿಸಿ ಛತ್ತೀಸ್‌ಗಡ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಪ್ರತಿಕೃತಿ ದಹಿಸಿತ್ತು.







