ಕೊಲ್ಲೂರು ದೇವಸ್ಥಾನ ಹಗರಣ: ಸಿಬಿಐ ತನಿಖೆಗೆ ಸಿಪಿಎಂ ಆಗ್ರಹ
ಉಡುಪಿ, ಮಾ.8: ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ತಿಜೋರಿಯ ಕೀಲಿಕೈ ನಾಪತ್ತೆ ಹಾಗೂ ದೇವಸ್ಥಾನದ ಆಭರಣಗಳು ಕಣ್ಮರೆಯಾಗಿರುವ ಪ್ರಕರಣದಲ್ಲಿ ದೇವಸ್ಥಾನದ ಧರ್ಮದರ್ಶಿಗಳಿಂದ ಹಿಡಿದು ಸಂಬಂಧಪಟ್ಟ ಎಲ್ಲರನ್ನು ತೀವ್ರ ತನಿಖೆಗೆ ಒಳಪಡಿಸಬೇಕು. ಹಾಗೂ ಇದಕ್ಕಾಗಿ ಸಿಬಿಐನಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.ಈಗ ಹೊರಬರುತ್ತಿರುವ ಮಾಹಿತಿಗಳಂತೆ ಈ ಹಿಂದೆ ದೇವಸ್ಥಾನದ ಚಿನ್ನ, ಬೆಳ್ಳಿ, ಸೀರೆ ಮೊದಲಾದ ಬೆಲೆ ಬಾಳುವ ವಸ್ತುಗಳು ಕಳವಾಗಿರುವ ಸಂದರ್ಭದಲ್ಲಿ ಆಡಳಿತ ಮಂಡಳಿ ತೋರಿದ ಕ್ಷಮಾದಾನ ಮತ್ತು ನಿರ್ಲಕ್ಷ್ಯತನ ಇಂದಿನ ಘಟನೆಗೆ ಕಾರಣವಾಗಿದೆ. ಆದ್ದರಿಂದ ಈ ಕುರಿತು ಆಮೂಲಾಗ್ರ ತನಿಖೆಯ ಅಗತ್ಯವಿದೆ ಎಂದು ಸಿಪಿಎಂ ಅಭಿಪ್ರಾಯಪಟ್ಟಿದೆ. ಎರಡು ವರ್ಷಗಳ ಹಿಂದೆ ದೇವಸ್ಥಾನಕ್ಕೆ ಸೇರಿದ 5.5 ಕೆ.ಜಿ. ತೂಕದ ಬೆಳ್ಳಿ ಗಟ್ಟಿಯನ್ನು ಸಿಬ್ಬಂದಿಯೊಬ್ಬರು ಮನೆಗೆ ಸಾಗಿಸುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಆತನ ಮನೆಯಿಂದ 12 ಕೆ.ಜಿ. ಬೆಲೆಬಾಳುವ ಬೆಳ್ಳಿ ಗಟ್ಟಿಯನ್ನು ವಶಪಡಿಸಿಕೊಂಡ ನಂತರವೂ ಅತನನ್ನು ನೌಕರಿಯಲ್ಲಿ ಮುಂದುವರಿಸಿರುವುದನ್ನು ಗಮನಿಸಿದರೆ ಇಲ್ಲಿನ ಕಳವು ಪ್ರಕರಣಗಳಿಗೆ ಪ್ರಭಾವಿ ವ್ಯಕ್ತಿಗಳ ಶ್ರೀರಕ್ಷೆ ಇದೆ ಎಂಬುದು ಸಾಬೀತಾಗುತ್ತದೆ. ಪ್ರಕರಣದ ಪ್ರಮುಖ ಆರೋಪಿ ನಕಲಿ ರಸೀದಿ ಮುದ್ರಿಸಿ ಭಕ್ತರ ಹಣ ಎಗರಿಸಿರುವುದು ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದು ಆತನಿಗೂ ಕ್ಷಮಾದಾನ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಆದ್ದರಿಂದ ಶ್ರೀಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ನಡೆದಿರುವ ಎಲ್ಲಾ ಕಳವು, ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐನಿಂದ ಉನ್ನತ ಮಟ್ಟದ ತನಿಖೆ ನಡೆಸಿ, ಎಲ್ಲಾ ತಪ್ಪಿತಸ್ಥರಿಗೂ ಉಗ್ರ ಶಿಕ್ಷೆ ನೀಡಬೇಕೆಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ.





