ಇರಾನಿ ಕಪ್: ಮುಂಬೈಗೆ ಭಾರೀ ಮುನ್ನಡೆ
ಮುಂಬೈ, ಮಾ.8: ಮೊದಲ ಇನಿಂಗ್ಸ್‌ನಲ್ಲಿ ಭಾರೀ ಮುನ್ನಡೆ ಸಂಪಾದಿಸಿರುವ ರಣಜಿ ಚಾಂಪಿಯನ್ ಮುಂಬೈ ತಂಡ ಇರಾನಿ ಕಪ್‌ನಲ್ಲಿ ಬಿಗಿ ಹಿಡಿತ ಸಾಧಿಸಿದೆ.
ಮೂರನೆ ದಿನವಾದ ಮಂಗಳವಾರ ಶೇಷ ಭಾರತ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 306 ರನ್‌ಗಳಿಗೆ ಆಲೌಟ್ ಮಾಡಿರುವ ಮುಂಬೈ ತಡ 297ರನ್ ಮುನ್ನಡೆ ಪಡೆದಿತ್ತು.
ಇನ್ನು ಎರಡು ದಿನಗಳ ಆಟ ಬಾಕಿ ಉಳಿದಿದ್ದು, ಈ ಋತುವಿನಲ್ಲಿ ಡಬಲ್ ಪ್ರಶಸ್ತಿ ಜಯಿಸುವತ್ತ ಮುಂಬೈ ದಿಟ್ಟ ಹೆಜ್ಜೆ ಇಟ್ಟಿದೆ.
1 ವಿಕೆಟ್‌ಗೆ 36 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಶೇಷ ಭಾರತದ ಪರ ಅಗ್ರ ಕ್ರಮಾಂಕದಲ್ಲಿ ಕರುಣ್ ನಾಯರ್(94) ಏಕಾಂಗಿ ಹೋರಾಟ ನೀಡಿದರು.
ಶೇಷ ಭಾರತ 128 ರನ್‌ಗೆ 5 ವಿಕೆಟ್ ಕಳೆದುಕೊಂಡಾಗ ಜೊತೆಯಾದ ನಾಯರ್ ಹಾಗೂ ಶೆಲ್ಡನ್ ಜಾಕ್ಸನ್ 59 ರನ್ ಸೇರಿಸಿದರು. ಈ ವರ್ಷದ ರಣಜಿಯಲ್ಲಿ ಸೌರಾಷ್ಟ್ರದ ಪರ ಅಗ್ರ ಸ್ಕೋರರ್ ಆಗಿರುವ ಜಾಕ್ಸನ್ 37 ರನ್‌ಗೆ ಪಾರ್ಟ್‌ಟೈಂ ಸ್ಪಿನ್ನರ್ ಜೈ ಬಿಸ್ತ್‌ಗೆ ವಿಕೆಟ್ ಒಪ್ಪಿಸಿದರು.
ನಾಯರ್ ಅವರೊಂದಿಗೆ ಕೈ ಜೋಡಿಸಿದ ಬಾಲಂಗೋಚಿ ಜೈದೇವ್ ಉನದ್ಕಟ್(48 ರನ್) 8ನೆ ವಿಕೆಟ್‌ಗೆ 91 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ಆಲ್‌ರೌಂಡರ್ ಅಭಿಷೇಕ್ ನಾಯರ್(3-35) ಯಶಸ್ವಿ ಬೌಲರ್ ಎನಿಸಿಕೊಂಡರು.ಇಕ್ಬಾಲ್ ಅಬ್ದುಲ್ಲಾ(2-62) ಹಾಗೂ ಜೈ ಬಿಸ್ತ(2-52) ತಲಾ 2 ವಿಕೆಟ್ ಪಡೆದಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಮುಂಬೈ ಪ್ರಥಮ ಇನಿಂಗ್ಸ್: 603
ಶೇಷ ಭಾರತ ಪ್ರಥಮ ಇನಿಂಗ್ಸ್: 306
(ಕರುಣ್ ನಾಯರ್ 94, ಉನದ್ಕಟ್ 48, ಅಭಿಷೇಕ್ ನಾಯರ್ 3-35)







