ವಿಜೇಂದರ್‌ರನ್ನು ಮಣಿಸಲು ಹಾವಿನ ರಕ್ತ ಕುಡಿಯುತ್ತಿರುವ ಹಂಗೇರಿಯನ್ ಬಾಕ್ಸರ್!

ಲಿವರ್‌ಪೂಲ್, ಮಾ.8: ಸತತ ಗೆಲುವಿನಿಂದ ಮಿಂಚುತ್ತಿರುವ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಅವರನ್ನು ಮಣಿಸಲು ಹಂಗೇರಿಯ ಯುವ ಬಾಕ್ಸರ್ ಅಲೆಕ್ಸಾಂಡರ್ ಹಾರ್ವತ್ ಹೊಸ ತಂತ್ರಕ್ಕೆ ಮೊರೆ ಹೋಗಿದ್ದಾರೆ.
ಮಾ.12 ರಂದು ನಡೆಯಲಿರುವ ಪಂದ್ಯದಲ್ಲಿ ವಿಜೇಂದರ್‌ರನ್ನು ಮಣಿಸಲು ಅಲೌಕಿಕ ಶಕ್ತಿಯನ್ನು ಪಡೆಯುವ ಉದ್ದೇಶದಿಂದ ಅಲೆಕ್ಸಾಂಡರ್ ಹಾವಿನ ರಕ್ತವನ್ನು ಕುಡಿಯುತ್ತಿದ್ದಾರೆ.
ವಿಜೇಂದರ್ ವೃತ್ತಿಪರ ಬಾಕ್ಸರ್ ಆಗಿ ಮಾರ್ಪಾಡಾದ ನಂತರ ಆಡಿರುವ ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ವಿಜೇಂದರ್‌ಗಿಂತಲೂ ಹೆಚ್ಚು ಅನುಭವಿ ಬಾಕ್ಸರ್ ಆಗಿರುವ ಅಲೆಕ್ಸಾಂಡರ್ ಇಂಗ್ಲೆಂಡ್‌ನಲ್ಲಿ ಇದೇ ಮೊದಲ ಬಾರಿ ಆಡಲಿದ್ದಾರೆ.
‘‘ನೂರಾರು ವರ್ಷಗಳಿಂದ ತನ್ನ ಕುಟುಂಬದವರು ಹಾವಿನ ತಾಜಾ ರಕ್ತವನ್ನು ಸೇವಿಸುತ್ತಾ ಬಂದಿದ್ದು, ಅದೊಂದು ನಮಗೆ ಹೆಮ್ಮೆಯ ಸಂಪ್ರದಾಯವಾಗಿದೆ. ತಾನು ನಿಜವಾದ ಹೋರಾಟಗಾರ. ತನ್ನ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಹಂಗೇರಿಯ ಸೈನಿಕರು ಟರ್ಕಿ ಸೈನಿಕರನ್ನು ಸೋಲಿಸಲು ಹಾವಿನ ರಕ್ತವನ್ನು ಕುಡಿಯುತ್ತಿದ್ದರಂತೆ. ಇದೀಗ ತಾನು ವಿಜೇಂದರ್ ಸಿಂಗ್‌ರನ್ನು ಸೋಲಿಸಲು ಹಾವಿನ ರಕ್ತವನ್ನು ಕುಡಿಯುತ್ತಿದ್ದೇನೆ’’ ಎಂದು ಅಲೆಕ್ಸಾಂಡರ್ ಹೇಳಿದ್ದಾರೆ.





