ಜೂನ್‌ನಲ್ಲಿ ಮಹಿಳಾ ಯುದ್ಧವಿಮಾನ ಪೈಲಟ್‌ಗಳ ಮೊದಲ ತಂಡ ವಾಯುಪಡೆಗೆ ಸೇರ್ಪಡೆ
ಹೊಸದಿಲ್ಲಿ,ಮಾ.8: ಮೂವರು ಕೆಡೆಟ್‌ಗಳನ್ನೊಳಗೊಂಡ ಮಹಿಳಾ ಯುದ್ಧವಿಮಾನ ಪೈಲಟ್‌ಗಳ ಮೊದಲ ತಂಡವು ಜೂ.18ರಂದು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳ್ಳಲಿದೆ ಎಂದು ಏರ್ ಚೀಫ್ ಮಾರ್ಷಲ್ ಅರೂಪ್ ರಹಾ ಅವರು ಮಂಗಳವಾರ ಇಲ್ಲಿ ತಿಳಿಸಿದರು.
ನಾವು 1991ರಲ್ಲಿಯೇ ಮಹಿಳಾ ಪೈಲಟ್‌ಗಳನ್ನು ನೇಮಕ ಮಾಡಿಕೊಂಡಿದ್ದೆವು, ಆದರೆ ಅದು ಹೆಲಿಕಾಪ್ಟರ್‌ಗಳು ಮತ್ತು ಸಾರಿಗೆ ವಿಮಾನಗಳಿಗಾಗಿ ಮಾತ್ರ ಆಗಿತ್ತು. ಯುದ್ಧವಿಮಾನಗಳಿಗೆ ಪೈಲಟ್‌ಗಳಾಗಿ ಮಹಿಳೆಯರನ್ನು ನೇಮಕಗೊಳಿಸುವ ವಾಯುಪಡೆಯ ಪ್ರಸ್ತಾವನೆಯನ್ನು ಒಪ್ಪಿಕೊಂಡಿದಕ್ಕಾಗಿ ರಕ್ಷಣಾ ಸಚಿವರಿಗೆ ನಾನು ಕೃತಜ್ಞನಾಗಿದ್ದೇನೆ ಎಂದರು.
ಸದ್ಯಕ್ಕೆ ಮೂವರು ಮಹಿಳೆಯರು ಯುದ್ಧವಿಮಾನಗಳ ಪೈಲಟ್‌ಗಳಾಗಲು ಮುಂದೆ ಬಂದಿದ್ದಾರೆ. ಅವರೀಗ ಎರಡನೆ ಹಂತದ ತರಬೇತಿ ಪಡೆಯುತ್ತಿದ್ದಾರೆ. ತರಬೇತಿ ಪೂರ್ಣಗೊಳಿಸಿದಾಗ ಅವರು ತಮ್ಮ ಪುರುಷ ಸಹೋದ್ಯೋಗಿಗಳಿಗೆ ಸರಿಸಮಾನರಾಗುತ್ತಾರೆ. ಪಾಸಿಂಗ್ ಔಟ್ ಪರೇಡ್ ಜೂ.18ರಂದು ನಡೆಯಲಿದೆ ಎಂದು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ರಹಾ ಹೇಳಿದರು.
ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು





