40ಕ್ಕೂ ಹೆಚ್ಚು ಲಾಂಚರ್‌ಗಳ ಪತ್ತೆ, ಪೊಲೀಸರ ವಶಕ್ಕೆ
ಬೆಳಗಾವಿ/ಬೆಂಗಳೂರು: ಇಲ್ಲಿನ ಸಂಕೇಶ್ವರದ ಹೊರವಲಯದ ಬಾವಿಯೊಂದರಲ್ಲಿ ಸೇನೆಯಲ್ಲಿ ಬಳಸುವ ರೀತಿಯಲ್ಲಿಯೇ ಇರುವ ಸುಮಾರು 30ಕ್ಕೂ ಹೆಚ್ಚು ಲಾಂಚರ್‌ಗಳು ಪತ್ತೆಯಾಗಿದ್ದು, ಸಂಕೇಶ್ವರ ಠಾಣಾ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದಾರೆ.
ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರ ವಲಯದ ತೋಟವೊಂದರಲ್ಲಿ ಬಾವಿಯ ಹೂಳು ತೆಗೆಯುವ ವೇಳೆಯಲ್ಲಿ 40ಕ್ಕೂ ಹೆಚ್ಚು ರಾಕೆಟ್ ಮಾರ್ಟರ್‌ಗಳು ಪತ್ತೆಯಾಗಿವೆ. ನಾಲ್ಕು ದಿನಗಳಿಂದ ಬಾವಿಯ ಹೂಳು ತೆಗೆಯುವಾಗ 11 ಅಡಿ ಆಳದ ಕೆಸರಿನಲ್ಲಿ ಈ ಮಾರ್ಟರ್‌ಗಳು ಸಿಲುಕಿಕೊಂಡಿದ್ದವು. ಮಾಜಿ ಸಚಿವ ಮಲ್ಲಾರಿಗೌಡ ಪಾಟೀಲ ಎಂಬವರಿಗೆ ಸೇರಿದ ತೋಟದ ಬಾವಿಯಲ್ಲಿ ಮಾರ್ಟರ್‌ಗಳು ದೊರೆತಿವೆ ಎನ್ನಲಾಗುತ್ತಿದೆ.
ದೊರೆತಿರುವ ಮಾರ್ಟರ್‌ಗಳು 1970ರ ದಶಕದ ಕಾಲದ್ದು ಎಂದು ಹೇಳಲಾಗುತ್ತಿದೆ. ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಕಾರಣದಿಂದ 40-50 ಅಡಿ ಆಳದ ಬಾವಿಯ ಹೂಳು ಎತ್ತುತ್ತಿರುವಾಗ ಈ ಮಾರ್ಟರ್‌ಗಳು 10 ಅಡಿ ಆಳದ ಕೆಸರಿನಲ್ಲಿ ದೊರೆತಿವೆ. ಈ ಎಲ್ಲ ಮಾರ್ಟರ್‌ಗಳನ್ನು ಮಾಜಿ ಸಚಿವ ಮಲ್ಲಾರಿಗೌಡ ಪಾಟೀಲ ಅವರ ಮನೆಯ ರೈತ ಅಶೋಕ ಕೋಳಿ ಎಂಬಾತ ಸಂಗ್ರಹಿಸಿಟ್ಟಿದ್ದು, ಪ್ರತೀ ದಿನವೂ ಇಂತಹ ವಿಚಿತ್ರವಾಗಿರೋ ವಸ್ತುಗಳು ಪತ್ತೆಯಾಗುತ್ತಿವೆ ಎಂದು ಗಾಬರಿಗೊಂಡ ಅಶೋಕ ಕೋಳಿ ತೋಟದ ಮಾಲಕ ಮಲ್ಲಾರಿಗೌಡ ಅವರಿಗೆ ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೀಗಾಗಿ ತೋಟದ ಮಾಲಕರೂ ಆಗಿರುವ ಮಾಜಿ ಸಚಿವ ಮಲ್ಲಾರಿಗೌಡ ಪಾಟೀಲ ಸಂಕೇಶ್ವರ ಪೊಲೀಸ್ ಠಾಣೆಗೆ ಈ ಕುರಿತು ಇಂದು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಬೆಳಗ್ಗೆ ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ 40ಕ್ಕೂ ಹೆಚ್ಚು ಮಾರ್ಟರ್‌ಗಳನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇಂದು ಅಧಿಕಾರಿಗಳ ಭೇಟಿ: ಸ್ಥಳಕ್ಕೆ ರಕ್ಷಣಾ ಇಲಾಖೆಯ ಅಧಿಕಾರಿಗಳು ಪರಿಶೀಲನೆಗೆ ಬರಲಿದ್ದು, ಈ ಸಂಬಂಧ ಅಧಿಕಾರಿಗಳ ಭೇಟಿಯ ನಂತರವೇ ಮಾರ್ಟರ್‌ಗಳ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.





