ಇಂದು ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ
ಬೆಂಗಳೂರು, ಮಾ.8: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಎನ್.ಎ.ಹಾರಿಸ್ ಫೌಂಡೇಷನ್ ವತಿಯಿಂದ ಮಾ.9ರಂದು ಹಲವು ಮಹಿಳೆಯರಿಗೆ ಗುಡ್ ಷೆಫರ್ಡ್ ಆಡಿಟೋರಿಯಂನಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಂತಿನಗರ ಶಾಸಕ ಎನ್.ಎ.ಹಾರಿಸ್, ಮಹಿಳೆಯರಿಗೆ ಆತ್ಮಸ್ಥೈರ್ಯವನ್ನು ತುಂಬುವುದರ ಜೊತೆಗೆ ಅವರಲ್ಲಿ ನಿಮ್ಮಿಂದಿಗೆ ನಾವಿದ್ದೇವೆ ನೀವು ಮುನ್ನಡೆಯಿರಿ ಎಂಬ ವಿಶ್ವಾಸವನ್ನು ಮೂಡಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಹುತಾತ್ಮ ಯೋಧ ಹನುಮಂತ ಕೊಪ್ಪದ್‌ರವರ ಪತ್ನಿ ಮಹಾದೇವಿ, ಸುಬೇದಾರ್ ನಾಗೇಶ್ ಪತ್ನಿ ಆಶಾ, ಕಲಬುರಗಿಯಲ್ಲಿ ಭೂಗತ ಪಾತಕಿ ಜೊತೆಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಮೃತಪಟ್ಟ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆಯವರ ಪತ್ನಿ ಮಲ್ಲಮ್ಮ ಇವರನ್ನು ಸತ್ಕರಿಸಿ, ಇವರ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯವನ್ನು ನೀಡಲಿದ್ದೇವೆ. ಇತ್ತೀಚೆಗೆ ಅಪಘಾತದಲ್ಲಿ ಮೃತರಾದ ಹರೀಶ್‌ರ ತಾಯಿ ಗೀತಾ ಮತ್ತು ಮೈಸೂರು ಜಿಲ್ಲೆಯ ಹುತಾತ್ಮ ಸಿಫಾಯಿ ಮಹೇಶ್‌ರ ತಾಯಿ ಸರ್ವಮಂಗಲ ಹಾಗೂ ಶಾಂತಿನಗರ ವ್ಯಾಪ್ತಿಯಲ್ಲಿನ ಪೌರ ಕಾರ್ಮಿಕ ಮಹಿಳೆಯರಿಗೆ ಮತ್ತು ಸ್ಥಳೀಯ ಪತ್ರಿಕೋದ್ಯಮ, ವೈದ್ಯಕೀಯ, ಪೊಲೀಸ್ ಹಾಗೂ ಇನ್ನಿತರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸಲಾಗುತ್ತದೆ ಎಂದು ಅವರು ತಿಳಿಸಿದರು.





