‘ರಬ್ಬರ್ ಉತ್ಪಾದನಾ ಪ್ರೋತ್ಸಾಹಧನ ಯೋಜನೆ’ ಘೋಷಿಸಲು ಮನವಿ
ಸುಳ್ಯ, ಮಾ.8: ರಾಜ್ಯ ಸರಕಾರದ ಈ ವರ್ಷದ ಬಜೆಟ್‌ನಲ್ಲಿ ‘ರಬ್ಬರ್ ಉತ್ಪಾದನಾ ಪ್ರೋತ್ಸಾಹಧನ ಯೋಜನೆ’ಯನ್ನು ಘೋಷಿಸುವಂತೆ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆಯ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದೆ.
ಗುತ್ತಿಗಾರು ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀಧರ್ ಜಿ. ಭಿಡೆ, ಪುತ್ತೂರು ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ಪ್ರಸಾದ್ ಕೌಶಲ್ಯ ಶೆಟ್ಟಿ ನಿಯೋಗದಲ್ಲಿದ್ದರು.
ರಾಜ್ಯದಲ್ಲಿ ಸುಮಾರು 60 ಸಾವಿರ ಹೆಕ್ಟೇರ್‌ಗಿಂತ ಹೆಚ್ಚು ವಿಸ್ತೀರ್ಣದಲ್ಲಿ ರಬ್ಬರ್ ಕೃಷಿ ಇದ್ದು, 5 ಲಕ್ಷಕ್ಕೂ ಅಕ ಮಂದಿ ಈ ಕೃಷಿಯನ್ನೇ ಅವಲಂಬಿಸಿ ಬದುಕುತ್ತಿದ್ದಾರೆ. ಕಳೆದ ವರ್ಷ ಕಿಲೋ ಒಂದಕ್ಕೆ 175ರಿಂದ 240 ರೂಪಾಯಿ ಧಾರಣೆ ಇದ್ದುದು ಈ ಬಾರಿ ಪ್ರಸ್ತುತ 100ಕ್ಕಿಂತಲೂ ಕೆಳಗೆ ಕುಸಿದಿದೆ. ಕೇರಳ ರಾಜ್ಯ ಸರಕಾರವು ಬೆಳೆಗಾರರ ರಕ್ಷಣೆಗೋಸ್ಕರ ರಬ್ಬರ್ ಉತ್ಪಾದನಾ ಪ್ರೋತ್ಸಾಹಧನ ಯೋಜನೆಯನ್ನು ಘೋಷಿಸಿದೆ. ಅದರಂತೆ ರಾಜ್ಯ ಸರಕಾರ ಕೂಡಾ ಈ ವರ್ಷದ ಬಜೆಟ್‌ನಲ್ಲಿ 100 ಕೋಟಿಯನ್ನು ಕಾಯ್ದಿರಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.





