ಇಪಿಎಫ್ ಮೇಲಿನ ತೆರಿಗೆ ಪ್ರಸ್ತಾವ ಹಿಂಪಡೆದ ಕೇಂದ್ರ

ಹೊಸದಿಲ್ಲಿ, ಮಾ.8: ಭಾರೀ ಟೀಕೆಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ವಿತ್ತಸಚಿವ ಅರುಣ್ ಜೇಟ್ಲಿ ಅವರು, ನೌಕರರ ಭವಿಷ್ಯನಿಧಿ(ಇಪಿಎಫ್) ಹಿಂದೆಗೆತದ ಮೇಲೆ ತೆರಿಗೆಯನ್ನು ಹೇರುವ ಮುಂಗಡಪತ್ರ ಪ್ರಸ್ತಾವವನ್ನು ಸರಕಾರವು ಹಿಂದೆಗೆದುಕೊಳ್ಳುತ್ತಿದೆ ಎಂದು ಮಂಗಳವಾರ ಸಂಸತ್ತಿನಲ್ಲಿ ಪ್ರಕಟಿಸಿದರು. ತನ್ನ ಪ್ರಯತ್ನಗಳ ಫಲವಾಗಿ ಸರಕಾರವು ಈ ಪ್ರಸ್ತಾವವನ್ನು ಹಿಂದೆಗೆದುಕೊಂಡಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಹೇಳಿಕೊಂಡಿದ್ದಾರೆ.
ಸರಕಾರವು ಮಧ್ಯಮ ವರ್ಗದ ಜನರನ್ನು ನೋಯಿಸುತ್ತಿದೆ ಎಂದು ತಾನು ಭಾವಿಸಿದ್ದೆ. ಹೀಗಾಗಿ ಸರಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದೆ. ತನ್ನ ಒತ್ತಡ ಕೆಲಸ ಮಾಡಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಮಂಗಳವಾರ ಬೆಳಗ್ಗೆ ಲೋಕಸಭೆಯಲ್ಲಿ ತನ್ನ ಸಂಕ್ಷಿಪ್ತ ಭಾಷಣದಲ್ಲಿ ತೆರಿಗೆ ಹೇರಿಕೆ ಹಿಂದೆಗೆತವನ್ನು ಪ್ರಕಟಿಸಿದ ಜೇಟ್ಲಿ, ಸರಕಾರವು ಈ ಪ್ರಸ್ತಾವವನ್ನು ಸಮಗ್ರವಾಗಿ ಪರಿಶೀಲಿಸಲು ಬಯಸಿದೆ ಎಂದು ತಿಳಿಸಿದರು. ಕಳೆದ ವಾರ ಮಂಡಿಸಲಾದ ಮುಂಗಡಪತ್ರದಲ್ಲಿ ಸೂಚಿಸಲಾಗಿದ್ದ ಇಪಿಎಫ್ ತೆರಿಗೆ ಪ್ರಸ್ತಾವವನ್ನು ಮಧ್ಯಮ ವರ್ಗ ವಿರೋಧಿ ಕ್ರಮ ಎಂದು ಪ್ರತಿಪಕ್ಷಗಳು ಬಣ್ಣಿಸಿದ್ದವು, ಜೊತೆಗೆ ಬಿಜೆಪಿಯ ಸೈದ್ಧಾಂತಿಕ ಗುರು ಆರೆಸ್ಸೆಸ್, ಸಂಘ ಪರಿವಾರದ ಬಿಎಂಎಸ್ ಕೂಡ ವಿರೋಧಿಸಿದ್ದವು.







