ಮಹಿಳೆಯರ ಬಗೆಗಿನ ತಾರತಮ್ಯ ನಿವಾರಿಸಿ: ಮೇಘರಿಕ್
ವಿಶ್ವ ಮಹಿಳಾ ದಿನಾಚರಣೆ

ಬೆಂಗಳೂರು, ಮಾ. 8: ಮಹಿಳೆಯರ ಬಗೆಗಿನ ತಾರತಮ್ಯದ ಮನೋಭಾವವನ್ನು ಶಾಶ್ವತವಾಗಿ ನಿವಾರಿಸಬೇಕೆಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಕರೆ ನೀಡಿದ್ದಾರೆ. ಮಂಗಳವಾರ ನಗರದ ಪೊಲೀಸ್ ಆಯುಕ್ತ ಕಚೇರಿಯ ಸಭಾಂಗಣದಲ್ಲಿ ಪರಿಹಾರ ವನಿತಾ ಸಹಾಯವಾಣಿ ಮತ್ತು ಬೆಂ.ನಗರ ಪೊಲೀಸ್ ವತಿಯಿಂದ ಆಯೋಜಿಸಿದ್ದ ‘ವಿಶ್ವ ಮಹಿಳಾ ದಿನಾಚರಣೆ’ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಿಳೆಯರು ಸಾಮಾಜಿಕ ಸಮಸ್ಯೆಗಳಿಂದ ಬಿಡುಗಡೆಯಾಗಬೇಕೆಂದರೆ, ನಾಗರಿಕ ಸಮಾಜ ಪ್ರೋತ್ಸಾಹ ನೀಡಬೇಕು. ಬೆಂಗಳೂರು ಪೊಲೀಸ್ ಇಲಾಖೆಯೂ ಮಹಿಳೆಯರ ರಕ್ಷಣೆಗಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ, ಎಲ್ಲವನ್ನು ಪೊಲೀಸರು ಸರಿಪಡಿಸಲು ಸಾಧ್ಯವಿಲ್ಲ, ಸಾರ್ವಜನಿಕರು ಪೊಲೀಸ್ ಚಟುವಟಿಕೆಗಳನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಪರಿಹಾರ ಮತ್ತು ವನಿತಾ ಸಹಾಯವಾ ಣಿಯಿಂದ ಸಾವಿರಾರು ನೊಂದ ಮಹಿಳೆಯರಿಗೆ ಈಗಾಗಲೇ ನ್ಯಾಯ ಸಿಕ್ಕಿದ್ದು, ಸಂತೋಷದಿಂದ ಬದುಕು ಸಾಗಿಸುತ್ತಿದ್ದಾರೆ ಎಂದ ಅವರು, ವನಿತಾ ಸಹಾಯವಾಣಿಯ ವ್ಯಾಪ್ತಿ ಹೆಚ್ಚಿಸಲು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನೂತನ ವೆಬ್‌ಸೈಟ್‌ಗೆ ಚಾಲನೆ ನೀಡಲಾಗಿದೆ. ಇದರಿಂದ ಮತ್ತಷ್ಟು ನೊಂದ ಮಹಿಳೆಯರನ್ನು ಮುಟ್ಟುವ ಗುರಿ ಹೊಂದಲಾಗಿದೆ ಎಂದು ಆಯುಕ್ತ ಮೇಘರಿಕ್ ಮಾಹಿತಿ ನೀಡಿದರು.
ಪ್ರಸೂತಿ ಮತ್ತು ಲೈಂಗಿಕ ತಜ್ಞೆ ಡಾ.ಪದ್ಮಿನಿ ಪ್ರಸಾದ್ ಮಾತನಾಡಿ, ಪುರುಷ ಪ್ರಧಾನ ಎನ್ನುವ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕಿದೆ. ಇಂದಿನ ಕಾಲಘಟ್ಟದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಇದೆ. ಇದನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ. ಮಹಿಳೆಯರು ಎಲ್ಲ ವಿಷಯಗಳಲ್ಲಿ ಮುಕ್ತವಾಗಿ ಚರ್ಚಿಸುವ ವೇದಿಕೆ ನಿರ್ಮಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್.ಹಿತೇಂದ್ರ, ಪರಿಹಾರ ಮುಖ್ಯ ಸಂಚಾಲಕಿ ರಾಣಿಶೆಟ್ಟಿ (ಅಪರಾಧ), ಹೆಚ್ಚುವರಿ ಆಯುಕ್ತರಾದ ಚರಣ್‌ರೆಡ್ಡಿ, ಕೆ.ವಿ.ಶರತ್‌ಚಂದ್ರ, ಕ್ಯಾರೆಕ್ಟರ್ ಸಲ್ಯೂಷನ್ ಇಂಟರ್‌ನ್ಯಾಷನಲ್ ರಾಷ್ಟ್ರೀಯ ನಿರ್ದೇಶಕ ಡಾ.ಡೇವಿಡ್ ದಾಸ್ ಸೇರಿ ಪ್ರಮುಖರು ಹಾಜರಿದ್ದರು.
ಮಹಿಳಾ ಚಟುವಟಿಕೆಗಳನ್ನು ಬೆಂಬಲಿಸಿ: ನಟಿ ಸುಧಾರಾಣಿ
ಮಹಿಳಾ ಪರ ಏರ್ಪಡಿಸುವ ಕಾರ್ಯಕ್ರ ಮಗಳನ್ನು ಪ್ರತಿಯೊಬ್ಬರು ಬೆಂಬಲಿಸಬೇಕು. ಇದರಿಂದ ನೊಂದ ಮಹಿಳೆಯರಿಗೆ ಸ್ಫೂರ್ತಿ ಸಿಗಲಿದೆ. ಮಹಿಳೆಯನ್ನು ಗೌರವಿಸುವ ವ್ಯವಸ್ಥೆ ದೇಶದಲ್ಲಿ ಇಂದಿಗೂ ನಿರ್ಮಾಣವಾಗಿಲ್ಲ. ಮಹಿಳೆಯರ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ನೀಡುವಂತೆ ಕಾರ್ಯಕ್ರಮದಲ್ಲಿ ಮನವಿ ಮಾಡಿದರು.







