"ಈ ಮಹಿಳೆಯ ಸ್ಥಿತಿ ನೋಡಿ, ಬಿಕ್ಕಳಿಸುತ್ತಾ ಕೇಳುತ್ತಿದ್ದಾಳೆ ತಾನೆಲ್ಲಿಗೆ ಹೋಗಲಿ"

ಪಟಿಯಾಲ, ಮಾ.9: ಇಲ್ಲಿನ ನಾಬಾ ಎಂಬಲ್ಲಿ ವಿವಾಹಿತ ಮಹಿಳೆಯನ್ನು ಆಕೆಯ ಪತಿ ಮತ್ತು ನಾದಿನಿ ಮನೆಯಿಂದ ಬಲವಂತವಾಗಿ ಹೊರಹಾಕಿದ್ದು ಈ ಕಾರಣದಿಂದ ಮಹಿಳೆ ಕಳೆದ ಎರಡು ದಿವಸಗಳಿಂದ ತನ್ನ ಮನೆಯ ಹೊರಗಡೆ ಟೆಂಟ್ ಹಾಕಿ ಕೂತು ತಾನೆಲ್ಲಿಗೆ ಹೋಗಲಿ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಸ್ವರ್ಣ ದೇವಿ ಹೇಳಿಕೊಳ್ಳುವ ಪ್ರಕಾರ ತನ್ನ ಪತಿ ಮೊದಲು ಕೆಲಸದವಳು ಕಳ್ಳತನ ಮಾಡಿದ್ದಾಳೆ ಎಂದು ಆರೋಪ ಹೊರಿಸಿ ಜೈಲು ಸೇರುವಂತೆ ಮಾಡಿದ್ದ. ಆನಂತರ ನಾದಿನಿಯೊಂದಿಗೆ ಸೇರಿ ತನ್ನನ್ನು ಮನೆಯಿಂದ ಒದ್ದು ಹೊರಹಾಕಿದ್ದಾನೆ. ಜೊತೆಗೆ ಮಹಿಳಾ ಪೊಲೀಸರು ತನ್ನ ಯಾವ ಮಾತನ್ನು ಕೇಳಿಸಿಕೊಳ್ಳುವುದಿಲ್ಲ ಎಂದು ಆರೋಪಿಸಿದ್ದಾರೆ. ಸಂತ್ರಸ್ತ ಮಹಿಳೆಯ ನೆರವಿಗೆ ಬಂದ ಮೊಹಲ್ಲಾದ ಇತರ ಮಹಿಳೆಯರು ಆಕೆಗೆ ಭಾರೀ ದೌರ್ಜನ್ಯವೆಸಗಲಾಗಿದೆ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ತಲುಪಿದ ಪೊಲೀಸರು ಸಂತ್ರಸ್ತೆಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಒಂದೆಡೆ ಮಾರ್ಚ್ ಎಂಟರಂದು ಜಗತ್ತಿನಾದ್ಯಂತ ಮಹಿಳಾ ದಿನಾಚರಣೆ ನಡೆದಿದೆ. ಇನ್ನೊಂದೆಡೆ ಮಹಿಳೆಯರ ಮೇಲೆ ದೌರ್ಜನ್ಯ ಮುಂದುವರಿಯುತ್ತಿದೆ. ಈ ಘಟನೆ ಸಮಾಜದಲ್ಲಿ ಮಹಿಳೆಯರ ಸ್ಥಿತಿಗತಿ ಹೇಗಿದೆಯೆಂಬುದನ್ನು ವಿವರಿಸುತ್ತಿದೆ.





