ವಿಶ್ವ ಸಾಂಸ್ಕೃತಿಕ ಉತ್ಸವ'ದ ತಯಾರಿಗೆ ಸೇನೆ ನಿಯೋಜನೆ; ರಾಜ್ಯಸಭೆಯಲ್ಲಿ ಸರಕಾರಕ್ಕೆ ವಿಪಕ್ಷ ಸದಸ್ಯರಿಂದ ತರಾಟೆ

ಹೊಸದಿಲ್ಲಿ, ಮಾ.9: ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 'ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸ್ಥಾಪನೆಗೊಂಡು 35ವರ್ಷವಾಗಿರುವ ಸಂದರ್ಭದಲ್ಲಿ ಯುಮುನಾ ನದಿ ತೀರದಲ್ಲಿ ಆಯೋಜಿಸಲಾಗಿರುವ 'ವಿಶ್ವ ಸಾಂಸ್ಕೃತಿಕ ಉತ್ಸವ'ದ ಸಿದ್ದತೆಗಾಗಿ ಸೇನೆಯನ್ನು ಕಳುಹಿಸಿರುವ ವಿಚಾರದಲ್ಲಿ ಇಂದು ರಾಜ್ಯಸಭೆಯಲ್ಲಿ ವಿಪಕ್ಷ ಸದಸ್ಯರು ಸರಕಾರವನ್ನು ತರಾಟೆಗೆ ತೆಗೆದುಕೊಂಡರು
ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಧುರೀಣ ಗುಲಾಮ್ ನಬಿ ಅಜಾದ್ ಮತ್ತು ಎಡರಂಗದ ಸೀತಾರಾಮ್ ಯಚೂರಿ ಅವರು ಕಾರ್ಯಕ್ರಮದ ತಯಾರಿಗೆ ಸೇನೆಯನ್ನು ಕಳುಹಿಸಿರುವ ಔಚಿತ್ಯವನ್ನು ಪ್ರಶ್ನಿಸಿದರು.
ಆರ್ಟ್ ಆಫ್ ಲಿವಿಂಗ್ ವಿಚಾರದಲ್ಲಿ ನಮ್ಮ ವಿರೋಧವಿಲ್ಲ. ಉತ್ಸವದಿಂದಾಗಿ ಪರಿಸರದ ಮೇಲೆ ಆಗುವ ಹಾನಿಯ ಬಗ್ಗೆ ಸರಕಾರಕ್ಕೆ ಕಾಳಜಿ ಇದೆಯೋ ? ಎಂದು ಪ್ರಶ್ನಿಸಿದರು. ಇತ್ತೀಚೆಗೆ ಹವಾಮಾನ ಶೃಂಗಸಭೆಗೆ ಹೋಗಿ ಬಂದಿರುವ ಪ್ರಧಾನ ಮಂತ್ರಿ ಇದೀಗ ರಾಜಧಾನಿಯಲ್ಲಿ ಪರಿಸರಕ್ಕೆ ಹಾನಿಯಾಗುವ ಕಾರ್ಯಕ್ರಮದ ಬಗ್ಗೆ ಯಾಕೆ ಮೌನ ವಹಿಸಿದ್ದಾರೆ ? ಎಂದು ಪ್ರಶ್ನಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಎಂಎಸ್ ಗಿಲ್ ಪರಿಸರ ಖಾತೆ ಸಚಿವರು ಎಲ್ಲಿದ್ದಾರೆ? ಅವರಿಂದ ಕಾರ್ಯಕ್ರಮದ ಬಗ್ಗೆ ಯಾಕೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿ ಎಂಪಿ ಮಹೇಶ್ ಗಿರಿ ಮಧ್ಯ ಪ್ರವೇಶಿಸಿ ಮಾತನಾಡಿ ಯಾವುದೇ ಧಾರ್ಮಿಕ ನಾಯಕರು ಈ ಉತ್ಸವದ ಬಗ್ಗೆ ತಕರಾರು ಎತ್ತಿಲ್ಲ. ಆದರೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ’ ಶ್ರೀ ಶ್ರೀಯ ಇವೆಂಟ್‌ಗೆ ಅಡ್ಡಿಪಡಿಸುವ ಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.
ಅಗತ್ಯದ ಅನುಮತಿ ಪಡೆದು ಸಂಘಟಕರು ಉತ್ಸವವನ್ನು ಆಯೋಜಿಸಿದ್ದಾರೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿಟಿ) ಈ ವಿಚಾರದ ಬಗ್ಗೆ ವಿಚಾರಣೆ ನಡೆಸುತ್ತಿದೆ ಎಂದು ಸಚಿವ ಮುಕ್ತಾರ‍್ ಅಬ್ಬಾಸ್ ನಕ್ವಿ ಹೇಳಿದರು
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವುದರಿಂದ ಇಲ್ಲಿ ಅದರ ಬಗ್ಗೆ ಪ್ರಸ್ತಾಪ ಬೇಡ ಎಂದರು.
ವಿಪಕ್ಷ ಸದಸ್ಯರು ಸದನದಲ್ಲಿ ಗದ್ದಲವನ್ನುಂಟು ಮಾಡಿದಾಗ ಉಪಸಭಾಪತಿ ಪಿ.ಜೆ .ಕುರಿಯನ್ ಕಲಾಪವನ್ನು ಮುಂದೂಡಿದರು.





