ಬಂಟ್ವಾಳ: ತೌಹೀದ್ ಶಾಲೆಯಲ್ಲಿ ಉಚಿತ ಆರೋಗ್ಯ ಶಿಬಿರ

ಬಂಟ್ವಾಳ, ಮಾ. 9: ಶಿಕ್ಷಣ ವಂಚಿತ ಸಮುದಾಯವನ್ನು ಮುಖ್ಯವಾಹಿನಿಗೆ ತರುವಲ್ಲಿ ಬಂಟ್ವಾಳ ತೌಹೀದ್ ಶಿಕ್ಷಣ ಸಂಸ್ಥೆ ವಿಶೇಷವಾಗಿ ಪರಿಶ್ರಮಿಸುತ್ತಿದ್ದು, ಗ್ರಾಮೀಣ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಹಲವಾರು ಚಿಂತನೆಗಳನ್ನು ರೂಪಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳ ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಕಣಚೂರು ಆಸ್ಪತ್ರೆ, ಸಂಶೋಧನಾ ಕೇಂದ್ರ, ತೌಹೀದ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ಇತ್ತೀಚೆಗೆ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವತ್ರಿಕ ಶಿಕ್ಷಣದಲ್ಲಿ ಆರೋಗ್ಯಕರವಾದ ಕ್ರಾಂತಿ ಮೂಡಿಸಿರುವ ತೌಹೀದ್ ಶಿಕ್ಷಣ ಸಂಸ್ಥೆ ಆರೋಗ್ಯ ಸೇವಾ ಸೌರ್ಕರ್ಯವನ್ನು ಪೋಷಕ ಹಾಗೂ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಮಾದರಿಯಾಗಿದೆ. ಶಾಲಾ ಶೈಕ್ಷಣಿಕ ಕಾರ್ಯವೈಖರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಚಿವರು, ಶಾಲೆಗೆ ವರ್ಷಂ ಪ್ರತಿ ಬರುತ್ತಿರುವ ಫಲಿತಾಂಶದ ಸಾಧನೆಯನ್ನು ಶ್ಲಾಘಿಸಿದರು.
ಗ್ರಾಮೀಣ ಪ್ರದೇಶದ ಅಲ್ಪಸಂಖ್ಯಾತ ಸಮುದಾಯಕ್ಕೆ ಆರೋಗ್ಯ ಸಂಬಂಧಿ ಸೇವಾ ಕಾರ್ಯಗಳು ಕೈಗೆಡುಕದ ಹಿನ್ನೆಲೆಯಲ್ಲಿ ಆರೋಗ್ಯ ಜಾಗೃತಿಯ ಕೊರತೆಯಿದೆ. ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ನೀಡುತ್ತಿರುವ ಆರೋಗ್ಯ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ವಿದ್ಯಾಸಂಸ್ಥೆಗಳು ಶ್ರಮಿಸಬೇಕೆಂದು ಕಣಚೂರು ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಜಿ ಯು.ಕೆ.ಮೋನು ತಿಳಿಸಿದರು.
ಬಂಟ್ವಾಳ ಜುಮಾ ಮಸೀದಿಯ ಮುದರಿಸ್ ಅನ್ಸಾರ್ ಫೈಝಿ ಬುರ್‌ಹಾನಿ ದುವಾ ನಿರ್ವಹಿಸಿದರು.
ಬುಡಾ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ವಿಜಯ ಬ್ಯಾಂಕ್ ಮೆನೇಜರ್ ಬೇಬಿ ಕುಂದರ್, ಡಿಸಿಸಿ ಉಪಾಧ್ಯಕ್ಷ ಬಿ.ಎಚ್.ಖಾದರ್, ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯೀಲ್ ಅರಬಿ, ಕಣಚೂರು ಆಸ್ಪತ್ರೆಯ ಆರೋಗ್ಯ ವೈದ್ಯಾಧಿಕಾರಿ ಡಾ. ದೇವಿ ಪ್ರಸಾದ್, ಸಹಾಯಕ ಆರೋಗ್ಯ ವೈದ್ಯಾಧಿಕಾರಿ ಡಾ. ರೋಹನ್ ಮೋನಿಶ್, ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಹಾಜಿ ಬಿ.ಎ.ಮುಹಮ್ಮದ್, ಪುರಸಭಾ ಸದಸ್ಯ ಮುನೀಶ್ ಅಲಿ, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಸದಸ್ಯ ಅಬ್ಬಾಸ್ ಅಲಿ, ಶಾಲಾಡಳಿತ ಮಂಡಳಿ ಸದಸ್ಯ ರಿಯಾರ್ ಹುಸೈನ್, ಮುಖ್ಯ ಶಿಕ್ಷಕಿ ಮೆಡಿಲ್ಡಾ ಡಿಕಾಸ್ತ, ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ಅಧ್ಯಕ್ಷ ಇಫಾಝತುಲ್ಲಾ ಉಪಸ್ಥಿತರಿದ್ದರು.








