ವಿಟ್ಲ : ಕೆದಿಲ, ಕಬಡ್ಡಿ ಪಂದ್ಯಾಟ ಹಾಗೂ ಸನ್ಮಾನ

ವಿಟ್ಲ : ಕೆದಿಲ-ಪಾಟ್ರಕೋಡಿಯ ಇಂಡಿಯನ್ ಸ್ಪೋರ್ಟ್ಸ್ ಕ್ಲಬ್ ಇದರ ಬೆಳ್ಳಿ ಹಬ್ಬದ ಪ್ರಯುಕ್ತ 65 ಕೆಜಿ ವಿಭಾಗದ ಕಬಡ್ಡಿ ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮವು ಇತ್ತೀಚೆಗೆ ಪಾಟ್ರಕೋಡಿ ಶಾಲಾ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಶಾಂತಿ-ಸೌಹಾರ್ದತೆಯನ್ನು ವೃದ್ದಿಗೊಳಿಸುವ ನಿಟ್ಟಿನಲ್ಲಿ ಕ್ರೀಡಾಕೂಟಗಳು ಮಹತ್ತರ ಪಾತ್ರ ವಹಿಸುತ್ತಿದ್ದು, ಮಾನವ ಸಂಬಂಧವನ್ನೂ ಗಟ್ಟಿಗೊಳಿಸುವಂತಹ ಇಂತಹ ಕಾರ್ಯಕ್ರಮಗಳು ನಾಡಿನಾದ್ಯಂತ ಉತ್ತಮ ರೀತಿಯಲ್ಲಿ ನಡೆಯುವಂತಾಗಲಿ ಎಂದರು. ಇದೇ ವೇಳೆ ಮಾಣಿ ಜಿ ಪಂ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವಿಜೇತ ಅಭ್ಯರ್ಥಿ ಮಂಜುಳಾ ಮಾಧವ ಮಾವೆ, ಸಜಿಪಮುನ್ನೂರು ಜಿ.ಪಂ. ಕ್ಷೇತ್ರದ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕೊಳ್ನಾಡು ಜಿ.ಪಂ. ಕ್ಷೇತ್ರದ ಸದಸ್ಯ ಎಂ.ಎಸ್. ಮುಹಮ್ಮದ್, ಕೆದಿಲ ತಾ.ಪಂ. ವಿಜೇತ ಅಭ್ಯರ್ಥಿ ಹಾಜಿ ಆದಂ ಕುಂಞಿ, ಮಾಣಿ ತಾ.ಪಂ. ಕ್ಷೇತ್ರದ ವಿಜೇತ ಸದಸ್ಯೆ ಮಂಜುಳಾ ಕುಶಲ, ವಿಟ್ಲಪಡ್ನೂರು ತಾ.ಪಂ. ಸದಸ್ಯೆ ಶೋಭಾ ರೈ ಅವರನ್ನು ಹಾಗೂ ಹಿರಿಯ ಕಬಡ್ಡಿ ಪಟುಗಳಾದ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಕೆದಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರವೀಣ್‌ಚಂದ್ರ ಶೆಟ್ಟಿ ಕಲ್ಲಾಜೆ ಅವರನ್ನು ಸನ್ಮಾನಿಸಲಾಯಿತು. ಕೆದಿಲ ವಲಯ ಕಾಂಗ್ರೆಸ್ ಅಧ್ಯಕ್ಷ ಸುಲೈಮಾನ್ ಸರೋಳಿ, ಉದ್ಯಮಿಗಳಾದ ಅಬ್ದುಲ್ ಖಾದರ್ ಪರ್ಲೊಟ್ಟು, ಇಬ್ರಾಹಿಂ ಬಾತಿಷಾ, ಸಿರಾಜ್ ಪಾಟ್ರಕೋಡಿ, ಶಾಹುಲ್ ಹಮೀದ್ ಕುಕ್ಕರಬೆಟ್ಟು, ಅಹ್ಮದ್ ಹಾಜಿ ಕುಕ್ಕರಬೆಟ್ಟು, ಮಾರ್ಶಲ್ ಪಾಯಸ್, ಕಾಸಿಂ ಪಾಟ್ರಕೋಡಿ, ಕೆ.ಬಿ. ಸಲೀಂ, ಕೆ.ಎಚ್. ಮುಹಮ್ಮದ್, ಹಾಜಿ ಇಬ್ರಾಹಿಂ ಕರಿಮಜಲು, ಎಸ್.ಎ. ಅಬ್ದುಲ್ ಖಾದರ್, ಪಾಟ್ರಕೋಡಿ ಶಾಲಾ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್. ಯೂಸುಫ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕುಕ್ಕಾಜೆ ತಂಡಕ್ಕೆ ಪ್ರಶಸ್ತಿ
ಕಬಡ್ಡಿ ಪಂದ್ಯಾಟದಲ್ಲಿ ನವಯುಗ ಸ್ಪೋಟ್ಸ್ ಕ್ಲಬ್ ಕುಕ್ಕಾಜೆ ತಂಡವು ಪ್ರಥಮ, ಇಂಡಿಯನ್ ಪಾಟ್ರಕೋಡಿ ತಂಡವು ದ್ವಿತೀಯ, ಸೆವೆನ್ ಸ್ಟಾರ್ ಪಂಜ ತಂಡವು ತೃತೀಯ ಹಾಗೂ ನ್ಯೂಸಂಗಮ್ ಪೆರ್ವೋಡಿ ತಂಡವು ಚತುರ್ಥ ಸ್ಥಾನಗಳನ್ನು ಪಡೆದುಕೊಂಡಿತು. ಉತ್ತಮ ಶಿಸ್ತು ಬದ್ದ ತಂಡ ಪ್ರಶಸ್ತಿಯನ್ನು ಮುಂಡ್ರಬೈಲು ಟೈಗರ್ಸ್ ತಂಡವು ತಮ್ಮದಾಗಿಸಿಕೊಂಡರೆ, ಇಂಡಿಯನ್ ಪಾಟ್ರಕೋಡಿ ತಂಡದ ಗಿರೀಶ್ ಅವರು ಉತ್ತಮ ಹಿಡಿತಗಾರ, ಬದ್ರುದ್ದೀನ್ ಆಲ್-ರೌಂಡರ್ ಪ್ರಶಸ್ತಿ ಹಾಗೂ ಕುಕ್ಕಾಜೆ ತಂಡದ ಇಕ್ಬಾಲ್ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಂಟ್ವಾಳ ತಾ.ಪಂ. ಸದಸ್ಯ ಹಾಜಿ ಆದಂ ಕುಂಞಿ ವಹಿಸಿದ್ದರು. ಕೆದಿಲ ಗ್ರಾ.ಪಂ. ಮಾಜಿ ಸದಸ್ಯ ಸುದರ್ಶನ್ ಕುದುಂಬ್ಲಾಡಿ, ಉದ್ಯಮಿ ಸಾಬಿ ಕುಂಞಿ, ಕೆ.ಎಸ್. ಹಮೀದ್ ಕಂಬಳಬೆಟ್ಟು, ಶಾಕಿರ್ ಅಳಕೆಮಜಲು, ಹರೀಶ್ ಕರಿಮಜಲು, ನೀಲಪ್ಪ, ಉನೈಸ್, ಮೆಹಬೂಬ್ ಪಾಟ್ರಕೋಡಿ ಮೊದಲಾದವರು ಉಪಸ್ಥಿತರಿದ್ದರು. ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಸ್ವಾಗತಿಸಿ, ಫಾರೂಕ್ ವಂದಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಹಾಗೂ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.







