ಕಿನ್ನಿಗೊಳಿ: ಯಕ್ಷಕವಿ ಸನ್ಮಾನ ಹಾಗೂ ಗೌರವಾರ್ಪಣೆ

ಕಿನ್ನಿಗೊಳಿ, ಮಾ.9: ಸುಮಾರು 40 ಕ್ಕೂ ಹೆಚ್ಚು ಯಕ್ಷಗಾನ ಸಾಹಿತ್ಯಗಳನ್ನು ರಚಿಸಿರುವ ಯಕ್ಷಕವಿ ಗಣೇಶ್ ಕೊಳಕಾಡಿ ಹಾಗೂ ಯಕ್ಷಗಾನ ಪೋಷಕ ಐಕಳ ಹರೀಶ್ ಶೆಟ್ಟಿ ದಂಪತಿಯನ್ನು ಯಕ್ಷಲಹರಿ (ರಿ) ಕಿನ್ನಿಗೋಳಿ ಇದರ ವತಿಯಿಂದ ಯಕ್ಷಕವಿ ಸನ್ಮಾನ ಹಾಗೂ ಗೌರವಾರ್ಪಣೆ ಸಲ್ಲಿಸಲಾಯಿತು.
ಕಿನ್ನಿಗೋಳಿ ಅಶ್ವಥಕಟ್ಟೆ ಬಳಿ ನಡೆದ ಯಕ್ಷಕವಿ ಸನ್ಮಾನ ಹಾಗೂ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಯಕ್ಷಕವಿ ಗಣೇಶ್ ಕೊಳಕಾಡಿ, ತಾನು ಯಕ್ಷಗಾನಲೋಕದಲ್ಲಿ ಪುಟ್ಟ ಹೆಜ್ಜೆ ಇಡುತ್ತಿರುವ ಮಗುಮಾತ್ರ. ತನ್ನೆಲ್ಲಾ ಸಾಧನೆಗಳು ಗುರುಗಳು ನೀಡಿದ ಬಿಕ್ಷೆ. ನನಗೆ ನೀಡುವ ಸನ್ಮಾನ, ಗೌರವ ಎಲ್ಲವೂ ಅವರಿಗೆ ಸಮರ್ಪಿಸುತ್ತಿದ್ದೇನೆ ಎಂದರು.
ಬಳಿಕ ಯಕ್ಷಗಾನ ಪ್ರೋತ್ಸಾಹಕರಾದ ಐಕಳ ಹರೀಶ್ ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು. ಅಲ್ಲದೆ, ಶ್ರೀ ಮಹಾಮ್ಮಹಿ ದೇವಸ್ಥಾನದಲ್ಲಿ ಅರ್ಚಕರಾಗಿದ್ದು ಅಕಾಲಿಕ ಮರಣ ಹೊಂದಿದ ದಿ. ಶಿವಪ್ಪರಾಣ ಅವರ ಕಾರ್ಯಗುರುತಿಸಿ ಅವರ ಕುಟುಂಬವನ್ನು ಗುರುತಿಸಿ ಕುಟುಂಬಕ್ಕೆ ಸಹಾಯಧನ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್‌ನ ಮಾಜೀ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಹಿಸಿದ್ದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಅರ್ಚಕ ಲಕ್ಷ್ಮಿನಾರಾಯಣ ಅಸ್ರಣ್ಣ ಆಶೀರ್ಚಚನ ಗೈದರು. ಪೊಂಪೈ ಕಾಳೇಜಿನ ಪ್ರಾಂಶುಪಾಲ ಜಗಧೀಶ್ ಹೊಳ್ಳ ಅಭಿನಂದನಾ ಮಾತುಗಳನ್ನಾಡಿದರು. ಐಕಳ ಗುಣಪಾಲ ಶೆಟ್ಟಿ, ವಿಜಯ ಬಂಡಾರಿ, ಭಾಸ್ಕರ ಶೆಟ್ಟಿ ತಾಳಿಪಾಡಿಗುತ್ತು, ಭುವನಾಭಿರಾಮ ಉಡುಪ, , ಐಕಳ ಮಹಾಬಲ ಶೆಟ್ಟಿ ಕುರ್ಬಿಲ್ ಗುತ್ತು, ಸ್ವಾತಿ ಸತೀಶ್ ಭಟ್, ವಿದ್ಯಾ ಸತೀಶ್ ಭಟ್, ಉದಯ ಶೆಟ್ಟಿ ಕೆರೆಗುತ್ತು ಮತ್ತಿತರರು ಇದ್ದರು. ಪಶುಪತಿ ಶಾಸ್ತ್ರಿ ಸ್ವಾಗತಿಸಿದರು. ವಸಂತ ದೇವಾಡಿಗ ದನ್ಯವಾದ ಗೈದರು. ರಘುನಾಥ ಕಾಮತ್ ಕಾರ್ಯಕ್ರಮ ನಿರೂಪಿಸಿದರು.





