ಕುಡಿಯುವ ನೀರು, ಸಾಂಕ್ರಾಮಿಕ ರೋಗಗಳ ಸಮಸ್ಯೆಯ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸಚಿವ ಖಾದರ್ ಸೂಚನೆ.
ಮಂಗಳೂರು, ಮಾ.9: ಬೇಸಿಗೆ ಕಾಲದಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆ ಹಾಗೂ ಅದರಿಂದ ಉಂಟಾಗುವ ಸಾಂಕ್ರಾಮಿಕ ರೋಗಗಳ ಕುರಿತಂತೆ ಎಚ್ಚರ ವಹಿಸುವಂತೆ ಮಂಗಳೂರು ತಾಲೂಕು ಪಂಚಾಯತ್ ವ್ಯಾಪ್ತಿಯ ಅಧಿಕಾರಿಗಳಿಗೆ ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್‌ರವರು ಸೂಚನೆ ನೀಡಿದ್ದಾರೆ.
ಮಂಗಳೂರು ತಾಲೂಕು ಪಂಚಾಯತ್ ಕಚೇರಿಯಲ್ಲಿ ಇಂದು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಪ್ರತಿನಿಧಿಗಳ ಜತೆ ಈ ಬಗ್ಗೆ ಚರ್ಚಿಸಿದ ಅವರು ಅಧಿಕಾರಿಗಳಿಗೆ ಬೋರ್‌ವೆಲ್ ತೆಗೆಯುವುದು, ತುರ್ತು ನೀರಿನ ವ್ಯವಸೆ್ಥ ಕುರಿತಂತೆ ನಿರ್ದೇಶನ ನೀಡಿದರು.ಪ್ರಸ್ತುತ ಮಂಗಳೂರು ತಾಲೂಕಿನಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿ ತೀರಾ ಹದಗೆಟ್ಟ ಪರಿಸ್ಥಿತಿ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಅಂತಹ ಸಮಸ್ಯೆ ಎದುರಾಗದಂತೆ ಅಧಿಕರಾರಿಗಳು ಎರಡು ದಿನಗಳಲ್ಲಿ ವಾರ್ಡ್‌ವಾರು ಸಭೆ ನಡೆಸಿ ಬೋರ್‌ವೆಲ್‌ಗಳನ್ನು ಕೊರೆಯುವುದು ಅತೀ ಅಗತ್ಯವಿರುವ ಬಗ್ಗೆ ಪಟ್ಟಿ ಮಾಡಿ ತಿಳಿಸಿದರೆ ಕ್ರಮ ಕೈಗೊಳು್ಳವುದಾಗಿ ಹೇಳಿದರು.
ಬೋರ್‌ವೆಲ್ ಹಾಕಿ ತಾತ್ಕಾಲಿಕ ಸಂಪರ್ಕಕ್ಕೆ ವಿದ್ಯುತ್ ಸಮಸ್ಯೆ ಎದುರಾಗುತ್ತಿದ್ದಲ್ಲಿ ಈ ಬಗ್ಗೆ ಪ್ರತ್ಯೇಕ ಪಟ್ಟಿ ನೀಡಿದ್ದಲ್ಲಿ ಕೆಇಬಿ ಅಧಿಕಾರಿಗಳ ಜತೆ ಮಾತುಕತೆ ನಡೆಸುವುದಾಗಿಯೂ ತಿಳಿಸಿದರು.
ಬೋರ್‌ವೆಲ್ ತೆಗೆಯಲು ಸಾಧ್ಯವಿಲ್ಲದ ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಅಧಿಕಾರಿಗಳಿಂದ ಕ್ರಮ ಕೈಗೊಳ್ಳಲಾಗುವುದು. ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಸಂಬಂಧಿಸಿ ವಿಮರ್ಶೆ ಮಾಡಿ ಕ್ರಮ ಕೈಗೊಳ್ಳಲಾಗುವುದು.
ಕುಡಿಯುವ ನೀರಿನ ಬಗ್ಗೆ ಎರಡು ದಿನಗಳ ಒಳಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ನಡೆದು ಕ್ರಮ ಕೈಗೊಳ್ಳಬೇಕು. ಇದೇ ವೇಳೆ ಸಾಂಕ್ರಾಮಿಕ ರೋಗಗಳ ಹಿನ್ನೆಲೆಯಲ್ಲಿ ವೈದ್ಯರೇ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ವೈದ್ಯರು ಬಾರದೆ ದಾದಿಯರನ್ನು ಕಳುಹಿಸಿದರೆ ಅದರ ಬಗ್ಗೆ ಗಮನಕ್ಕೆ ತಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವ ಯು.ಟಿ.ಖಾದರ್ ತಿಳಿಸಿದರು.
ಗ್ರಾಮಗಳಲ್ಲಿ ನೈರ್ಮಲ್ಯ ಸಮಿತಿ ಸಭೆ ನಡೆಸಬೇಕೆಂದು ಸೂಚಿಸಿದ ಅವರು, ಗ್ರಾ.ಪಂ. ವ್ಯಾಪ್ತಿಯಲ್ಲಿ ಎಲ್ಲಿ ನೀರು ನಿಲುತ್ತದೆ. ಎಲ್ಲಿ ಪೈಪ್‌ಲೈನ್ ಒಡೆದು ಕೊಳಚೆ ನೀರು ಕುಡಿಯುವ ನೀರಿನೊಂದಿಗೆ ಸೇರುತ್ತದೆ ಎಂಬ ಬಗ್ಗೆ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಮತದಾರರ ಚೀಟಿ ಸಮಸ್ಯೆ: 15 ದಿನಗಳಲ್ಲಿ ಬಗೆಹರಿಸುವ ಭರವಸೆ
ಸಭೆಯಲ್ಲಿ ಉಪಸ್ಥಿತರಿದ್ದ ಕೆಲ ಗ್ರಾಪಂಗಳ ಪ್ರತಿನಿಧಿಗಳು ಇತ್ತೀಚಿನ ಚುನಾವಣೆಯಲ್ಲಿ ಮತದಾರರ ಗುರುತಿನ ಚೀಟಿ ಇಲ್ಲದೆ ಸಮಸ್ಯೆಯಾಗಿದೆ. ಈ ಹಿಂದಿನ ಚುನಾವಣೆಯಲ್ಲಿ ಮತ ಚಲಾಯಿಸಿದ್ದರೂ ಈ ಬಾರಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಅಳಿಸಿ ಹಾಕಿ ಸಮಸ್ಯೆ ಸೃಷ್ಟಿಯಾಗಿದೆ ಎಂದು ಆರೋಪಿಸಿದರು.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪರಸ್ಪರ ವಿಶ್ವಾಸದಿಂದ ಕಾರ್ಯ ನಿರ್ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ತಿಳಿ ಹೇಳಿದ ಸಚಿವ ಖಾದರ್, ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿರುವವರ, ಅಳಿಸಿ ಹೋಗಿರುವವರ ಪಟ್ಟಿಯನ್ನು ನೀಡಿದ್ದಲ್ಲಿ 15 ದಿನಗಳಲ್ಲಿ ಸರಿ ಪಡಿಸಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮತದಾನ ಕಡಿಮೆ ಆಗಲು ರೇಶನ್ ಕಾರ್ಡ್ ಕಾರಣ!
ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಮತದಾನ ಕಡಿಮೆ ಆಗುವಲ್ಲಿ ರೇಶನ್ ಕಾರ್ಡ್ ಸಮಸ್ಯೆ ಕಾರಣ ಎಂದು ಸಭೆಯಲ್ಲಿ ಗ್ರಾ.ಪಂ. ಪ್ರತಿನಿಧಿಗಳು ಆಕ್ಷೇಪಿಸಿದರು.
ರೇಶನ್ ಕಾರ್ಡ್ ಪರಿಷ್ಕರಣೆಯಿಂದ ಹಲವಾರು ಸಮಸ್ಯೆಗಳಾಗಿವೆ. ಬಿಪಿಎಲ್‌ನವರಿಗೆ ಎಪಿಎಲ್ ಕಾರ್ಡ್ ಸಿಕ್ಕಿದೆ. ಗೊಂದಲದಿಂದ ಬೇಸತ್ತು ಜನರು ಮತದಾನಕ್ಕೆ ಬಂದಿಲ್ಲ ಎಂದು ಸಭೆಯಲ್ಲಿ ದೂರಿದಾಗ, ರೇಶನ್ ಕಾರ್ಡ್‌ಗೆ ಸಂಬಂಧಿಸಿ ಸೋಮವಾರ (ಮಾ. 14)ರಂದು ತಾಲೂಕು ಪಂಚಾಯತ್ ಕಚೇರಿಯಲ್ಲಿ ಸಭೆ ನಡೆಸುವುದಾಗಿ ಸಚಿವ ಖಾದರ್ ಹೇಳಿದರು. ಸಭೆಯಲ್ಲಿ ಪಿಡಿಒಗಳು, ಗ್ರಾಮ ಲೆಕ್ಕಿಗರು ಹಾಗೂ ಸಮಸ್ಯೆ ಇರುವುವರು ಭಾಗವಹಿಸಬಹುದು ಎಂದು ಅವರು ಹೇಳಿದರು.







