ಸುಳ್ಯದಲ್ಲಿ ಮಾದಕ ವಸ್ತು ಜಾಲ ಸ್ಥಳೀಯ ಯುವಕರಿಂದ ಕಾರ್ಯಾಚರಣೆ
ಸುಳ್ಯ: ಗಾಂಜಾ ಸೇವನೆ ಚಟಕ್ಕೆ ಬಲಿ ಬಿದ್ದು ಸಾರ್ವಜನಿಕರಿರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಮತ್ತು ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ಸುಳ್ಯದಲ್ಲಿ ಮಾದಕ ವಸ್ತುಗಳ ಜಾಲ ವ್ಯಾಪಕಗೊಂಡಿದೆ. ಯುವಕರು ಮತ್ತು ವಿದ್ಯಾರ್ಥಿಗಳೇ ಇದಕ್ಕೆ ಬಲಿ ಬೀಳುತ್ತಿರುವ ಆಘಾತಕಾರಿ ಘಟನೆ ನಡೆಯುತ್ತಿವೆ. ಮಾದಕ ಮಾಫಿಯ ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಿರಂತರವಾಗಿ ಗಾಂಜಾ ಪೂರೈಕೆ ಮಾಡುತ್ತಿದ್ದರೂ ಇಲಾಖೆ ಈ ಕುರಿತು ಕಾರ್ಯಾಚರಣೆ ನಡೆಸುತ್ತಿಲ್ಲ ಎಂಬ ಆರೋಪಗಳೂ ಕೇಳಿ ಬರುತ್ತಿವೆ.
ಈ ಮಧ್ಯೆ ಕುರುಂಜಿಭಾಗ್‌ನ ಲೋಹಿತ್ ಎಂಬ ಯುವಕ ಮಾದಕ ವಸ್ತುಗಳ ದಾಸನಾಗಿದ್ದು, ಕಳೆದ ಮೂರು ತಿಂಗಳಿನಿಂದ ಸಾರ್ವಜನಿಕರಿರೊಂದಿಗೆ ಅನುಚಿವಾಗಿ ವರ್ತಿಸುತ್ತಿದ್ದ ಮತ್ತು ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ. ಬುಧವಾರ ಸ್ಥಳೀಯ ಯುವಕರು ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದು ಆತನ ಮನೆಯವರಿಗೆ ತಿಳಿಸಿ ಬಳಿಕ ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಗೆ ಕರೆ ತಂದರು. ಆತನಿಗೆ ಚಿಕಿತ್ಸೆ ನೀಡುವ ಸಲುವಾಗಿ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸುಳ್ಯದಲ್ಲಿ ಮಾದಕ ವಸ್ತುಗಳ ಜಾಲ ಕಾರ್ಯಾಚರಿಸುತ್ತಿದ್ದು, ನೂರಾರು ಯುವಕರು ಇದಕ್ಕೆ ಬಲಿಯಾಗಿದ್ದಾರೆ. ಪೊಲೀಸರು ಇಂತಹವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಯುವ ಬ್ರಿಗೇಡ್ ಅಧ್ಯಕ್ಷ ಲೋಕೇಶ್ ಕೆರೆಮೂಲೆ ಆಗ್ರಹಿಸಿದ್ದಾರೆ.







