ಪುತ್ತೂರು: ವಿದ್ಯುತ್ ಸಮಸ್ಯೆ ಸರಿಪಡಿಸಲು ಇಲಾಖೆಗೆ ಮನವಿ
ಪುತ್ತೂರು, ತಾಲೂಕಿನ ಇರ್ದೆ, ಬೆಟ್ಟಂಪಾಡಿ, ನಿಡ್ಪಳ್ಳಿ ಮತ್ತು ಪಾಣಾಜೆ ಗ್ರಾಮದ ವಿದ್ಯುತ್ ಬಳಕೆದಾರರಿಗೆ ಅನಿಯಮಿತ ವಿದ್ಯುತ್ ಕಡಿತ ಮತ್ತು ಕಳಪೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ಸಮಸ್ಯೆ ಉಂಟಾಗಿದ್ದು, ಇದನ್ನು ತಕ್ಷಣವೇ ಸರಿಪಡಿಸುವಂತೆ ಈ 4 ಗ್ರಾಮದ ಬಳಕೆದಾರರರು ಮೆಸ್ಕಾಂ ಅಧಿಕಾರಿಗಳಗೆ ಬುಧವಾರ ಮನವಿ ಸಲ್ಲಿಸಿ ಆಗ್ರಹಿಸಿದರು. ಕಳಪೆ ಗುಣಮಟ್ಟದ ವಿದ್ಯುತ್‌ನಿಂದಾಗಿ ಬಳಕೆದಾರರ ವಿದ್ಯುತ್ ಉಪಕರಣ ಕೆಟ್ಟು ಕೃಷಿ ಬೆಳೆಗಳಿಗೆ ಹಾನಿಯಾಗಿದೆ, ಬಳಕೆದಾರರಿಗೆ ಹಾನಿಯಾಗಿರುವುದಲ್ಲದೆ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ. ಒಂದು ವಾರದ ಒಳಗಾಗಿ ಗುಣಮಟ್ಟದ ವಿದ್ಯುತ್ ನೀಡಿ ಕೃಷಿಕರ ಬದುಕನ್ನು ಉತ್ತಮಗೊಳಿಸಬೇಕು. ಈ ಬಗ್ಗೆ ಇಲಾಖೆ ಸ್ಪಂಧಿಸದಿದ್ದಲ್ಲಿ 4 ಗ್ರಾಮಗಳ ರೈತರು ಮತ್ತು ಬಳಕೆದಾರರು ಬೆಟ್ಟಂಪಾಡಿ ಮೆಸ್ಕಾಂ ಕಚೇರಿ ಮುಂಬಾಗದಲ್ಲಿ ವಾಸ್ತವ್ಯ ಹೂಡಲಿದ್ದೇವೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ಮೆಸ್ಕಾಂ ಕಿರಿಯ ಅಭಿಯಂತರ ರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಮಾವತಿ, ಮಾಜಿ ಅಧ್ಯಕ್ಷ ಸುಂದರ ನಾಯಕ್, ಸದಸ್ಯರಾದ ರಮೇಶ್ ಶೆಟ್ಟಿ ಕೊಮ್ಮಂಡ, ಪ್ರಕಾಶ ರೈ ಬೈಲಾಡಿ, ದ.ಕ. ಹಾಲು ಒಕ್ಕೂಟದ ನಿರ್ದೇಶ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಸಂದೀಪ್ ತಲೆಪ್ಪಾಡಿ ನಿಯೋಗದಲ್ಲಿದ್ದರು. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸರಿಯಾದ ರೀತಿಯಲ್ಲಿ ವ್ಯವಸ್ಥೆಗೊಳಿಸಲು ತನ್ನಿಂದಾದ ಪ್ರಯತ್ನ ಮಾಡುವುದಾಗಿ ಈ ಸಂದರ್ಭದಲ್ಲಿ ಮೆಸ್ಕಾಂ ಶಾಖಾಧಿಕಾರಿ ರಮೇಶ್ ಅವರು ನಿಯೋಗಕ್ಕೆ ಭರವಸೆ ನೀಡಿದರು.





