ಮೂಡುಬಿದಿರೆ: ಜೇಸಿಸ್‌ನಿಂದ ವಿಶ್ವ ಮಹಿಳಾ ದಿನಾಚರಣೆ ನಾಲ್ವರು ಮಹಿಳಾ ಸಾಧಕಿಯರಿಗೆ ಸನ್ಮಾನ

ಮುಡುಬಿದಿರೆ : ಮಹಿಳೆಯರಾಗಲಿ, ಪುರುಷರಾಗಲಿ ಅಹಂ ಬಿಟ್ಟಾಗ ಸಮಾಜ ಸುಧಾರಣೆಯಾಗಲು ಸಾಧ್ಯ ಹೊರತು ಮಹಿಳಾ ಮೀಸಲಾತಿಯ ಹೋರಾಟದಿಂದ ಸಮಾನತೆ ಗಳಿಸಲು ಸಾಧ್ಯವಿಲ್ಲ. ಪ್ರತೀ ಮನೆಯಲ್ಲೂ ಸಮಾನತೆ ಆರಂಭಗೊಂಡರೆ ಮಾತ್ರ ಇದು ಯಶಸ್ಸುಗೊಳ್ಳಲು ಸಾಧ್ಯ ಎಂದು ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಮೌಲ್ಯ ಜೀವನ್ ಹೇಳಿದರು.
ಇಲ್ಲಿನ ತ್ರಿಭುವನ್ ಜೇಸಿಸ್ ವತಿಯಿಂದ ಸಮಾಜಮಂದಿರದಲ್ಲಿ ಮಂಗಳವಾರ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜಕ್ಕಾಗಿ ದುಡಿದು ಎಲೆಮರೆ ಕಾಯಿಯಂತಿರುವ ಮಹಿಳೆಯರನ್ನು ಗುರುತಿಸಿ ಗೌರವಿಸುವ ಕೆಲಸ ಸಂಘ ಸಂಸ್ಥೆಗಳಿಂದಾಗಬೇಕು ಎಂದು ಹೇಳಿದರು. ತ್ರಿಭುವನ್ ಜೇಸಿಐ ಅಧ್ಯಕ್ಷೆ ರಶ್ಮಿತಾ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಜೇಸಿಸ್ ವಲಯ 15ರ ಕಾರ್ಯದರ್ಶಿ ಸತೀಶ್ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪ್ರತಿಯೊಬ್ಬರಿಗೂ ಹೆಣ್ಣಿನ ಆಸರೆ ಬೇಕು. ಆದರೂ ಮಹಿಳೆಯರನ್ನು ನಿಯಂತ್ರಿಸುವ ಕೆಲಸ ಪುರುಷರಿಂದಾಗುತ್ತಿದೆ. ಮಹಿಳೆಯರ ಬಗ್ಗೆ ಇರುವ ವಿಕೃತಿಯನ್ನು ಹೋಗಲಾಡಿಸಬೇಕು ಎಂದರು. . ಮಹಿಳಾ ಸಾಧಕಿಯರಿಗೆ ಸನ್ಮಾನ : ರಿಕ್ಷಾ ಚಾಲಕಿ ರಾಧಿಕಾ, ಚರುಂಬುರಿ ವೃತ್ತಿಯ ಗಾಯತ್ರಿ ಪ್ರಭು, ನಾಟಿ ವೈದ್ಯೆ ಲಲಿತಾ, ಉಪ್ಪಿನಕಾಯಿ ವ್ಯಾಪಾರಿ ಕಲಾವತಿ ಅವರನ್ನು ಇದೇ ಸಂಧರ್ಭದಲ್ಲಿ ಸನ್ಮಾನಿಸಲಾಯಿತು. ಜೇಸಿರೆಟ್ ಅಧ್ಯಕ್ಷೆ ದೀಪಾ ಉಮೇಶ್ ರಾವ್, ಜ್ಯೂನಿಯರ್ ಜೇಸಿಐ ಅಧ್ಯಕ್ಷ ಆಕಾಶ್ ದೀಪ್, ಕಾರ್ಯದರ್ಶಿ ಪ್ರಜ್ವಲ್, ಮಕ್ಬೂಲ್ ಹುಸೇನ್, ಅಬುಲ್ ಆಲಾ, ಮಹಮ್ಮದಾಲಿ ಅಬ್ಬಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಶ್ಮಿತಾ ಯುವರಾಜ ಜೈನ್ ವಂದಿಸಿದರು. ನಂತರ ಜೇಸಿಐ ಸದಸ್ಯೆಯರಿಂದ ನೃತ್ಯ ಕಾರ್ಯಕ್ರಮ ಹಾಗೂ ಮಹಿಳೆಯರು ತಯಾರಿಸಿದ ಆಹಾರ ವೈವಿಧ್ಯ ಪ್ರದರ್ಶನ ನಡೆಯಿತು.





