ಸಿರಿಯ: ಹಸಿವೆಯಿಂದ ನರಳುತ್ತಿರುವ 2.5 ಲಕ್ಷ ಮಕ್ಕಳು
ಯುದ್ಧವಿರಾಮ ಜಾರಿಯಲ್ಲಿದ್ದರೂ ಪರಿಸ್ಥಿತಿಯಲ್ಲಿ ಸುಧಾರಣೆಯಿಲ್ಲ: ‘ಸೇವ್ ದ ಚಿಲ್ಡ್ರನ್’ ವರದಿ

ಲಂಡನ್, ಮಾ. 9: ಸಿರಿಯದಲ್ಲಿ ಯುದ್ಧವಿರಾಮ ಜಾರಿಗೆ ಬಂದಿರುವ ಹೊರತಾಗಿಯೂ, ಮುತ್ತಿಗೆಗೊಳಗಾಗಿರುವ ದೇಶದ ‘‘ಬಯಲು ಬಂದೀಖಾನೆ’’ಗಳಲ್ಲಿ ಸುಮಾರು ಎರಡೂವರೆ ಲಕ್ಷ ಮಕ್ಕಳು ಹಸಿವಿನಿಂದ ನರಳುತ್ತಿದ್ದಾರೆ ಎಂದು ಮಕ್ಕಳನ್ನು ರಕ್ಷಿಸಿ ಎಂದು ಕರೆಕೊಡುವ ಅಭಿಯಾನ ‘ಸೇವ್ ದ ಚಿಲ್ಡ್ರನ್’ ಹೇಳಿದೆ.
ಅದೇ ವೇಳೆ, ಶಾಶ್ವತ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಬುಧವಾರ ಆರಂಭವಾಗಬೇಕಿದ್ದ ಶಾಂತಿ ಸಭೆಯ ಭವಿಷ್ಯ ಅಯೋಮಯವಾಗಿದೆ.
ಸಿರಿಯದ 18 ವಿವಿಧ ಪ್ರದೇಶಗಳಲ್ಲಿ ಸುಮಾರು 4,86,700 ಜನರು ಒಂದೋ ಸರಕಾರಿ ಅಥವಾ ಪ್ರತಿಪಕ್ಷ ಪಡೆಗಳಿಂದ ಮುತ್ತಿಗೆಗೊಳಗಾಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಈ ಪ್ರದೇಶಗಳ ಒಳಗೆ ಅಥವಾ ಹೊರಗೆ ಆಹಾರ, ಔಷಧ ಅಥವಾ ಇಂಧನ ಪೂರೈಕೆಯಾಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿರುವ ಜನರ ಸಂಖ್ಯೆ 19 ಲಕ್ಷವನ್ನೂ ಮೀರಿದೆ ಎಂಬುದಾಗಿ ಕೆಲವು ನೆರವು ಸಂಸ್ಥೆಗಳು ಅಂದಾಜಿಸಿವೆ.
ಫೆಬ್ರವರಿ 7ರಂದು ಜಾರಿಗೆ ಬಂದ ಯುದ್ಧವಿರಾಮದ ಹಿನ್ನೆಲೆಯಲ್ಲಿ ಇಂಥ ಮುತ್ತಿಗೆಗೊಳಗಾಗಿರುವ ಪ್ರದೇಶಗಳ ಪರಿಸ್ಥಿತಿ ಸುಧಾರಿಸುವುದು ಹಾಗೂ ಅಲ್ಲಿಗೆ ತಲುಪಲು ನೆರವು ಸಂಸ್ಥೆಗಳಿಗೆ ಸಾಧ್ಯವಾಗುವುದು ಎಂಬ ಆಶಾಭಾವವನ್ನು ಇಟ್ಟುಕೊಳ್ಳಲಾಗಿತ್ತು. ಈವರೆಗೆ ಸುಮಾರು 1.5 ಲಕ್ಷ ಜನರನ್ನು ತಲುಪಲು ಬೆರಳೆಣಿಕೆಯಷ್ಟು ನೆರವು ತಂಡಗಳಿಗೆ ಸಾಧ್ಯವಾಗಿದೆ. ಆದರೆ, ನೆರವು ಪ್ರಮಾಣ ಸಾಲುತ್ತಿಲ್ಲ ಎಂಬುದಾಗಿ ನೆರವು ಸಂಸ್ಥೆಗಳು ಮತ್ತು ನಿವಾಸಿಗಳು ಹೇಳಿದ್ದಾರೆ.
ಈ ಪ್ರದೇಶಗಳಿಗೆ ಹೋಗಲು ಪ್ರತಿ ತಂಡಕ್ಕೆ ಪ್ರತ್ಯೇಕವಾಗಿ ಪರವಾನಿಗೆಗಳನ್ನು ನೀಡಲಾಗುತ್ತಿದೆ. ಕೆಲವು ವಾರಗಳಿಗೆ ಸಾಕಾಗುವಷ್ಟು ಪ್ರಮಾಣದ ದಾಸ್ತಾನುಗಳನ್ನಷ್ಟೇ ಒಯ್ಯಲು ಈ ತಂಡಗಳಿಗೆ ಸಾಧ್ಯವಾಗಿದೆ. ಮುಂದಿನ ಪೂರೈಕೆ ಯಾವಾಗ ಎಂಬ ಖಾತರಿ ಯಾರಲ್ಲೂ ಇಲ್ಲ.
ದಿನಕ್ಕೆ ಒಂದು ಹೊತ್ತಿನ ಊಟವೂ ಇಲ್ಲದ ದಿನಗಳು ಹಲವು ಬಾರಿ ಎದುರಾಗಿವೆ ಎಂಬುದಾಗಿ ಸಿರಿಯದ ನಿವಾಸಿಗಳು ಹೇಳಿದ್ದಾರೆ ಎಂದು ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ‘ಸೇವ್ ದ ಚಿಲ್ಡ್ರನ್’ ಹೇಳಿದೆ. ಆಹಾರವಿಲ್ಲದೆ ತಮ್ಮ ಪಟ್ಟಣಗಳಲ್ಲಿ ಮಕ್ಕಳು ಸಾಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
‘‘ನನ್ನ ಓರ್ವ ಸಂಬಂಧಿಯ ಗಂಡು ಶಿಶು ಮಕ್ಕಳ ಆಹಾರವಿಲ್ಲದೆ ಅಪೌಷ್ಟಿಕತೆಯಿಂದಾಗಿ ಮೃತಪಟ್ಟಿತು’’ ಎಂದು ಡಮಾಸ್ಕಸ್‌ನ ಉಪನಗರ ಮಿಸ್ರಬದಲ್ಲಿನ ಮಹಿಳೆಯೊಬ್ಬರು ‘ಸೇವ್ ದ ಚಿಲ್ಡ್ರನ್’ಗೆ ಹೇಳಿದ್ದಾರೆ. ‘‘ತೀರಾ ಅನಾರೋಗ್ಯದಿಂದಾಗಿ ಮಗುವಿಗೆ ಹಾಲೂಡಿಸಲು ತಾಯಿಗೆ ಆಗಿರಲಿಲ್ಲ’’ ಎಂದರು







