ಉಪ್ಪಿನಂಗಡಿ: ಟಿಪ್ಪರ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲಿಯೇ ಮೃತ

ಉಪ್ಪಿನಂಗಡಿ: ಅತೀ ವೇಗದಿಂದ ಬಂದ ಟಿಪ್ಪರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ಸಂಜೆ ಉಪ್ಪಿನಂಗಡಿಯ ಆದಿತ್ಯ ಹೊಟೇಲ್ ಬಳಿ ನಡೆದಿದೆ. ಘಟನೆ ಬಳಿಕ ಲಾರಿ ನಿಲ್ಲಿಸಿ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಉಪ್ಪಿನಂಗಡಿ ಗ್ರಾಮದ ಮಠ ಹಿರ್ತಡ್ಕ ನಿವಾಸಿ ಅಹಮ್ಮದ್ ಎಂಬವರ ಪುತ್ರ ಮುಹಮ್ಮದ್ ಹಸೈನಾರ್ (28) ಮೃತ ದುರ್ದೈವಿ. ಘಟನೆಯ ವಿವರ: ಚಾಲಕ ವೃತ್ತಿ ನಡೆಸುವ ಮುಹಮ್ಮದ್ ಹಸೈನಾರ್ ತನ್ನ ಮನೆ ಕಡೆ ಟಿವಿಎಸ್ ಕಂಪೆನಿಯ ಜುಪಿಟರ್ ಮೊಪೆಡ್‌ನಲ್ಲಿ ತೆರಳುತ್ತಿದ್ದು, ಆದಿತ್ಯ ಹೊಟೇಲ್ ಬಳಿ ರಾಷ್ಟ್ರೀಯ ಹೆದ್ದಾರಿ ಬದಿ ದ್ವಿಚಕ್ರ ವಾಹನ ನಿಲ್ಲಿಸಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಟಿಪ್ಪರೊಂದು ನೆಲ್ಯಾಡಿ ಕಡೆ ಡಾಮರು ಮಿಶ್ರಣ ಸಾಗಿಸುತ್ತಿದ್ದ ರಾಜ್‌ಕಮಲ್ ಕನ್‌ಸ್ಟ್ರಕ್ಷನ್‌ನವರಿಗೆ ಸೇರಿದ ಟಿಪ್ಪರ್ ಅತೀ ವೇಗ ಹಾಗೂ ಅಜಾಗರುಕತೆಯಿಂದ ಬಂದು ರಸ್ತೆ ಬದಿ ನಿಂತಿದ್ದ ಮುಹಮ್ಮದ್ ಹಸೈನಾರ್‌ಗೆ ಡಿಕ್ಕಿ ಹೊಡೆಯಿತು. ಘಟನೆಯಿಂದ ಮುಹಮ್ಮದ್ ಹಸೈನಾರ್ ಸ್ಥಳದಲ್ಲಿಯೇ ಸಾವನ್ನಪಿದ್ದು, ದ್ವಿಚಕ್ರ ವಾಹನ ಛಿದ್ರವಾಗಿ ಹೋಗಿದೆ. ಅಪಘಾತ ನಡೆಸಿದ ಬಳಿಕವೂ ಅದೇ ವೇಗದಲ್ಲಿ ಲಾರಿಯನ್ನು ಮುಂದಕ್ಕೆ ಚಲಾಯಿಸಿಕೊಂಡು ತಪ್ಪಿಸಲೆತ್ನಿಸಿದ್ದು, ಈ ಸಂದರ್ಭ ಪ್ರತ್ಯಕ್ಷದರ್ಶಿಗಳು ನಿಲ್ಲಿಸಲು ಬೊಬ್ಬೆ ಹೊಡೆದುದರಿಂದ ಅಪಘಾತ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿ ಲಾರಿಯನ್ನು ನಿಲ್ಲಿಸಿ ಸಮೀಪದ ತೋಟಕ್ಕೆ ಹಾರಿ ಪರಾಯಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ. ಈ ಸಂದರ್ಭ ಪ್ರತ್ಯಕ್ಷದರ್ಶಿಗಳು ಈತನ ಬೆನ್ನಟ್ಟಿದರಾದರೂ ಈತ ಮಾತ್ರ ಪರಾರಿಯಾಗಿದ್ದಾನೆ. ಮುಹಮ್ಮದ್ ಹಸೈನಾರ್ ವಿವಾಹಿತರಾಗಿದ್ದು, ಇಬ್ಬರು ಹೆಣ್ಣು ಹಾಗೂ ಓರ್ವ ಗಂಡು ಮಗುವನ್ನು ಹೊಂದಿದ್ದಾರೆ. ಲಾರಿಗೂ ಸವರಿದ್ದ: ಇಲ್ಲಿ ರಸ್ತೆ ಹಾಗೂ ಅದರ ಬದಿ ವಿಶಾಲವಾಗಿದ್ದು, ಮುಹಮ್ಮದ್ ಹಸೈನಾರ್ ಡಾಮರು ರಸ್ತೆಯಿಂದ ಕೆಳಗಿಳಿದು ರಸ್ತೆ ಬದಿಯ ತೀರಾ ಅಂಚಿನಲ್ಲಿ ನಿಂತು ಮೊಬೈಲ್‌ನಲ್ಲಿ ಮಾತನಾಡಿಕೊಂಡಿದ್ದರು. ಆದರೂ ಕೂಡಾ ಟಿಪ್ಪರ್ ಚಾಲಕನ ಅಜಾಗರೂಕತೆಯ ಚಾಲನೆಗೆ ಮುಹಮ್ಮದ್ ಹಸೈನಾರ್ ಬಲಿಯಾಗಬೇಕಾಯಿತು. ಮುಹಮ್ಮದ್ ಹಸೈನಾರ್ ನಿಂತಿದ್ದ ಸ್ವಲ್ಪ ಹಿಂದೆ ಲಾರಿಯೊಂದು ನಿಂತಿದ್ದು, ಅದನ್ನು ಸವರಿಕೊಂಡು ಬಂದು ಟಿಪ್ಪರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ದ್ವಿಚಕ್ರ ವಾಹನ ಛಿದ್ರ: ಅಪಘಾತದ ತೀವ್ರತೆಗೆ ದ್ವಿಚಕ್ರ ವಾಹನ ಸಂಪೂರ್ಣ ಛಿದ್ರವಾಗಿದ್ದು, ಬಿಡಿ ಭಾಗಗಳು ದೂರಕ್ಕೆಸೆಯಲ್ಪಟ್ಟಿದ್ದವು. ಡಿಕ್ಕಿ ಹೊಡೆದ ಬಳಿಕ ಲಾರಿ ಕೂಡಾ ದ್ವಿಚಕ್ರ ಸ್ವಲ್ಪ ದೂರ ಎಳೆದುಕೊಂಡು ಹೋಗಿದೆ. ಇದರಿಂದಾಗಿ ದ್ವಿಚಕ್ರ ವಾಹನದ ಅಳಿದುಳಿದ ಭಾಗಗಳು ಗುಜರಿಗೆ ಹಾಕಲು ಪುಡಿಮಾಡಿದ ಕಬ್ಬಿಣದಂತೆ ಭಾಸವಾಗುತ್ತಿತ್ತು.
ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಿಂದ ಸುಮಾರು ಒಂದು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿತ್ತು.





