ಉಳ್ಳಾಲ: ಶಿಶು ಭವಿಷ್ಯ ನಿಧಿಗೆ ಚಾಲನೆ

ಉಳ್ಳಾಲ: ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಒಂದು ವರ್ಷದಲ್ಲಿ 140 ರಿಂದ 131ಕ್ಕೆ ಇಳಿಕೆಯಾಗಿದ್ದು, ಸರಕಾರ ಹೆರಿಗೆ ಮತ್ತು ಶಿಶು ಅಭಿವೃದ್ಧಿಗಾಗಿ ಖಾಸಗಿ ಆಸ್ಪತ್ರೆಗಳ ಜತೆಗೆ ಸೇರಿಕೊಂಡು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ನಾಟೆಕಲ್ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಬುಧವಾರ ನಡೆದ ಕಣಚೂರು ಶಿಶು ಭವಿಷ್ಯ ನಿಧಿಗೆ ಚಾಲನೆ ನೀಡಿ ಮಾತನಾಡಿದರು.
ಹೆರಿಗೆ ಸಮಯದಲ್ಲಿ ತಾಯಿ ಮಗು ಆರೋಗ್ಯಯುತವಾದಲ್ಲಿ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ. ಹೆರಿಗೆ ಸಂಬಂಧಿಸಿ ಉಚಿತ ಸವಲತ್ತುಗಳನ್ನು ನೀಡಿ, ಅದೇ ಮಕ್ಕಳು ದೊಡ್ಡವರಾದ ಬಳಿಕವೂ ಸಹಕರಿಸುವ ಕಣಚೂರು ಸಂಸ್ಥೆಯ ಯೋಜನೆ ಗ್ರಾಮೀಣ ಭಾಗದ ಜನರಿಗೆ ತುಂಬಾ ಸಹಕಾರಿಯಾಗಲಿದೆ. ಗ್ರಾಮೀಣ ಭಾಗಗಳಲ್ಲಿ ಆಸ್ಪತ್ರೆ ಸ್ಥಾಪಿಸಿ ಅಲ್ಲಿನ ಜನರಿಗೆ ಆರೋಗ್ಯ ಒದಗಿಸುವ ಕಾರ್ಯ ನಡೆಸುವ ಸಂಸ್ಥೆಯ ಕಾರ್ಯ ಶ್ಲಾಘನೀಯ. ರಾಜ್ಯದಲ್ಲಿ 2014ರಲ್ಲಿ ಶಿಶು ಮರಣದ ಸಂಖ್ಯೆ 140 ರಷ್ಟು ಇದ್ದು, 2015 ರಲ್ಲಿ 131ಕ್ಕೆ ಇಳಿಕೆ ಕಂಡಿದೆ. ಇದು ರಾಜ್ಯ ಸರಕಾರದ ವಿವಿಧ ಯೋಜನೆಗಳಿಂದ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಹುಟ್ಟಿದ ನಂತರ 18ರ ವಯಸ್ಸಿನವರೆಗೂ ಉಚಿತ ಚಿಕಿತ್ಸೆ ನೀಡುವ ಕುರಿತು ಸರಕಾರ ಚಿಂತನೆ ನಡೆಸುತ್ತಿದೆ ಎಂದರು. ಕಣಚೂರು ಆಸ್ಪತ್ರೆ ಅಧ್ಯಕ್ಷ ಯು.ಕಣಚೂರು ಮೋನು ಮಾತನಾಡಿ ಶಿಶು ನಿಧಿ ಕೆಲವೇ ದಿನಗಳಿಗೆ ಸೀಮಿತವಲ್ಲ. ಇದು ಮುಂದಿನ ದಿನಗಳಲ್ಲಿ ಮುಂದುವರಿಯುವುದು. ಇದರ ಸದುಪಯೋಗವನ್ನು ಎಲ್ಲಾ ವರ್ಗದವರು ಪಡೆಯಬಹುದು ಎಂದರು. ಕಾರ್ಯಕ್ರಮದಲ್ಲಿ ಕಣಚೂರು ಸಂಶೋಧನಾ ಕೇಂದ್ರ ಮತ್ತು ಆಸ್ಪತ್ರೆಯ ನಿರ್ದೇಶಕ ಅಬ್ದುಲ್ ರಹಿಮಾನ್, ಕಣಚೂರು ಶಿಕ್ಷಣ ಸಂಸ್ಥೆಯ ಡೀನ್ ಡಾ. ಅರುಣಾಚಲಂ ಕುಮಾರ್,ಕರ್ಣಾಟಕ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್ ರಾವ್, ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ದೇವಿ ಪ್ರಸಾದ್, ಆಸ್ಪತ್ರೆಯ ಸಹಾಯಕ ಡೀನ್ ಡಾ. ಶ್ರೀಶಾ ಖಂಡಿಗ, ಔಷಧ ವಿಭಾಗದ ಮುಖ್ಯಸ್ಥ ಡಾ. ರತ್ನಾಕರ್ ಯು.ಪಿ, ಫಿಸಿಯೋಲಜಿ ವಿಭಾಗ ಮುಖ್ಯಸ್ಥ ಡಾ. ಬಿ. ಉದಯಶಂಕರ್, ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥ ಯೋಗಿಶ್ ಬಿ. ಬಂಗೇರ, ಟ್ರಸ್ಟಿಗಳಾದ ಜೊಹಾರ ಮೋನು, ಉವಯ ಭಾನು, ಚರ್ಮಶಾಸ್ತ್ರ ವಿಭಾಗದ ಮುಖ್ಯಸ್ಥ ನರೇಂದ್ರ ಕಾಮತ್, ಸರಿತ ಸತ್ಯಾರ್ಥಿ ಕಾರ್ಯಕ್ರಮ ನಿರ್ವಹಿಸಿದರು, ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಪ್ರೊ. ಪ್ರಸಾದ್ ನಾಯಕ್ ಸ್ವಾಗತಿಸಿದರು. ಆಸ್ಪತ್ರೆ ಆಡಳಿತಾಧಿಕಾರಿ ಡಾ. ರೋಹನ್ ಶಾಲಂ ಮೋನಿಸ್ ವಂದಿಸಿದರು.
ಶಿಶು ಭವಿಷ್ಯ ನಿಧಿ:
ನಾಟೆಕಲ್ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಜನಿಸುವ ಪ್ರತಿ ಮಕ್ಕಳ ಹೆಸರಿನಲ್ಲಿ 1,000 ರೂಪಾಯಿಗಳನ್ನು 15 ವರ್ಷಗಳಿಗೆ ಬ್ಯಾಂಕಿನಲ್ಲಿ ಠೇವಣಿ ಇಡಲಾಗುವುದು. ಆಸ್ಪತ್ರೆಯಲ್ಲಿ ಹೆರಿಗೆಗೆ ಬರುವ ಎಲ್ಲಾ ಗರ್ಭಿಣಿಯರಿಗೆ ಅಲ್ಟ್ರಾಸೌಂಡ್ , ಎಕ್ಸ್ ರೇ, ಸ್ಕ್ಯಾನಿಂಗ್, ರಕ್ತ ಪರೀಕ್ಷೆ ಸಾಮಾನ್ಯ ಮತ್ತು ಸಿಸೇರಿಯನ್ ಹೆರಿಗೆ ಹಾಗೂ ಉಚಿತ ಊಟ. ನವಜಾತ ಶಿಶುವಿಗೆ ಸೀಳ್ದುಟಿ, ಸಮಸ್ಯೆ ಕಂಡುಬಂದಲ್ಲಿ ಅದಕ್ಕೂ ಶಸ್ತ್ರಚಿಕಿತ್ಸೆಯ ವ್ಯವಸ್ಥೆ ಯೋಜನೆ ಹೊಂದಿದೆ.







