ಪಶ್ಚಿಮ ಬಂಗಾಳದಲ್ಲಿ ಮತ್ತೆ ದೀದಿ ರಾಜ್ ?
ತೃಣಮೂಲಕ್ಕೆ ಪ್ರಚಂಡ ಬಹುಮತ : ಬೇಹು ವರದಿ, ಬಿಜೆಪಿಗೆ ಶೂನ್ಯ ಸಂಪಾದನೆಯ ಸಾಧ್ಯತೆ

ಹೊಸದಿಲ್ಲಿ, ಮಾ.9: ವಿಧಾನ ಸಭಾ ಚುನಾವಣೆಗೆ ಎಲ್ಲ ಪಕ್ಷಗಳು ಇನ್ನೂ ಸಜ್ಜಾಗುತ್ತಿರುವಂತೆಯೇ ಬೇಹು ಇಲಾಖೆ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿರುವ ಪ್ರಥಮ ವರದಿಯಲ್ಲಿ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ( ಟಿ ಎಂ ಸಿ) ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಪ್ರಚಂಡ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಮರಳಲಿದೆ ಎಂದು ಹೇಳಲಾಗಿದೆ. ಈ ವರದಿ, ಮೂರು ದಶಕಗಳ ಕಾಲ ಆಳಿದ ಬಳಿಕ ಕಳೆದುಕೊಂಡ ಬಂಗಾಳದ ಕೆಂಪು ಕೋಟೆಯನ್ನು ಮತ್ತೆ ವಶಪಡಿಸಿಕೊಳ್ಳುವ ಎಡರಂಗದ ಆಸೆಗೆ ತಣ್ಣೀರೆರಚಿದೆ.
ವರದಿಯ ಪ್ರಕಾರ ಟಿ ಎಂ ಸಿ ಈ ಬಾರಿ ಜಯಭೇರಿ ಬಾರಿಸುವುದು ಮಾತ್ರವಲ್ಲದೆ 2011 ರಲ್ಲಿ ಪಡೆದ 184 ಸ್ಥಾನಗಳಿಗಿಂತಲೂ ಹೆಚ್ಚು ಸ್ಥಾನಗಳನ್ನು ಈ ಬಾರಿ ಪಡೆಯಲಿದೆ. ಬಿಜೆಪಿ ತನ್ನ ಭರ್ಜರಿ ಪ್ರಚಾರ ಭರಾಟೆಯ ಹೊರತಾಗಿಯೂ 5 ಕ್ಕಿಂತ ಹೆಚ್ಚು ಸ್ಥಾನ ಗಳಿಸದು ಎಂದಿರುವ ವರದಿ ಬಿಜೆಪಿ ಶೂನ್ಯ ಸಂಪಾದನೆ ಮಾಡಿದರೂ ಅಚ್ಚರಿಯಿಲ್ಲ ಎಂದು ಹೇಳಿದೆ. ಕಾಂಗ್ರೆಸ್ 20-25 ಸ್ಥಾನಗಳನ್ನು ಪಡೆದರೆ , ಎಡರಂಗ ಕಳೆದ ಬಾರಿಯಂತೆ ಎರಡನೇ ದೊಡ್ಡ ಪಕ್ಷವಾಗಿ 60-70 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ರಾಜ್ಯದಲ್ಲಿರುವ ಪರಿಸ್ಥಿತಿಯನ್ನು ಆಧರಿಸಿ ಈ ವರದಿಯನ್ನು ಕಳಿಸಲಾಗಿದೆ. " ಇದು ಪ್ರಾಥಮಿಕ ವರದಿ ಮಾತ್ರ. ಇನ್ನು ಎಲ್ಲ ಪಕ್ಷಗಳ ಸ್ಥಾನ ಹಂಚಿಕೆ ಅಂತಿಮಗೊಂಡ ಬಳಿಕ ಪರಿಸ್ಥಿತಿ ಬದಲಾಗಲೂಬಹುದು" ಎಂದು ಬೇಹು ಇಲಾಖೆಯ ಅಧಿಕಾರಿಯೊಬ್ಬರು ಹಿಂದುಸ್ತಾನ್ ಟೈಮ್ಸ್ ಗೆ ತಿಳಿಸಿದ್ದಾರೆ ಎಂದು ಝೀ ನ್ಯೂಸ್ ವರದಿ ಮಾಡಿದೆ.
ಸದ್ಯಕ್ಕೆ ರಾಜ್ಯದ ಅತ್ಯಂತ ಜನಪ್ರಿಯ ನಾಯಕಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಂದೂ ವರದಿಯಲ್ಲಿದೆ.





