30,000 ಅಡಿ ಎತ್ತರದಲ್ಲಿ ಬಾಗಿಲು ತೆರೆದ ಕುಡುಕ: ವಿಮಾನ ತುರ್ತು ಭೂಸ್ಪರ್ಶ

ಲಂಡನ್, ಮಾ. 9: ವಿಮಾನವೊಂದು 30,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಕುಡುಕ ಬ್ರಿಟಿಶ್ ಪ್ರಯಾಣಿಕನೊಬ್ಬ ವಿಮಾನದ ಬಾಗಿಲನ್ನು ತೆರೆಯಲು ಯತ್ನಿಸಿದ. ಗಾಬರಿಗೊಂಡ ಸಿಬ್ಬಂದಿ ತಕ್ಷಣ ವಿಮಾನವನ್ನು ಫ್ರಾನ್ಸ್‌ನ ವಿಮಾನ ನಿಲ್ದಾಣವೊಂದರಲ್ಲಿ ತುರ್ತಾಗಿ ಇಳಿಸಿದ ಘಟನೆ ವರದಿಯಾಗಿದೆ.
ಈಸಿಜೆಟ್ ಕಂಪೆನಿಯ ಏರ್‌ಬಸ್ ಎ320 ವಿಮಾನ ಸೋಮವಾರ ಮೊರೊಕ್ಕೊದ ಮರಕೇಚ್‌ನಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ಪ್ರಯಾಣಿಸುತ್ತಿತ್ತು. ಪ್ರಯಾಣಿಕನೊಬ್ಬ ಕುಡಿತದ ಅಮಲಿನಲ್ಲಿ ದಾದಾಗಿರಿ ನಡೆಸಿದ ಪ್ರಯಾಣಿಕನೊಬ್ಬ ಆಸನಗಳ ನಡುವಿನ ದಾರಿಯಲ್ಲಿ ಅತ್ತಿತ್ತ ಸುಳಿದಾಡಿದನು ಹಾಗೂ ವಿಮಾನದ ತುರ್ತು ಬಾಗಿಲನ್ನು ತೆರೆಯಲು ಧಾವಿಸಿದನು ಎನ್ನಲಾಗಿದೆ. ಇತರ ಪ್ರಯಾಣಿಕರು ಅವನನ್ನು ತಡೆಯಲು ಯತ್ನಿಸಿದರಾದರೂ ಆತ ಮತ್ತೆ ಮತ್ತೆ ತನ್ನ ಪ್ರಯತ್ನವನ್ನು ಮುಂದುವರಿಸಿದನು. ಆಗ ವಿಮಾನವು ಲಂಡನ್‌ನಿಂದ ಸುಮಾರು 650 ಮೈಲಿ ದೂರದಲ್ಲಿತ್ತು. ತನ್ನ ನಿಗದಿತ ದಾರಿಯನ್ನು ಬದಲಿಸಿದ ವಿಮಾನ ಫ್ರಾನ್ಸ್‌ನ ಬೋರ್ಡೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ನಡೆಸಿತು.
ವಿಮಾನ ನಿಲ್ದಾಣದಲ್ಲಿ ಫ್ರೆಂಚ್ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದರು.





