ಪೊಲೀಸ್ ದೂರು ಪ್ರಾಧಿಕಾರಗಳ ವರದಿ: ಮಾರ್ಚ್ ಅಂತ್ಯಕ್ಕೆ ಸಲ್ಲಿಕೆ
ಬೆಂಗಳೂರು, ಮಾ.9: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ದೂರು ಪ್ರಾಧಿಕಾರಗಳಲ್ಲಿ 2014 ಮತ್ತು 15ನೆ ವರ್ಷದಲ್ಲಿ ದಾಖಲಾಗಿರುವ ಮತ್ತು ಇತ್ಯರ್ಥವಾಗಿರುವ ಪ್ರಕರಣಗಳ ಬಗ್ಗೆ ಮಾರ್ಚ್ ಅಂತ್ಯದ ವೇಳೆಗೆ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಪೊಲೀಸ್ ದೂರು ಪ್ರಾಧಿಕಾರ ರಚನೆ ಮಾಡುವ ಕುರಿತಂತೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎ.ಎನ್.ವೇಣುಗೋಪಾಲ್‌ಗೌಡ ಅವರಿದ್ದ ನ್ಯಾಯಪೀಠ, ರಾಜ್ಯದಲ್ಲಿ ಪೊಲೀಸರ ವಿರುದ್ಧ ದಾಖಲಾಗಿರುವ ಪ್ರಕರಣಗಳು, ಅವುಗಳಿಗೆ ಕಾರಣಗಳು, ಯಾವ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗಿ ಎಷ್ಟು ದಿನವಾಗಿದೆ, ಎಷ್ಟು ಪ್ರಕರಣಗಳು ಇತ್ಯರ್ಥವಾಗಿದೆ ಎಂಬ ಎಲ್ಲ ಅಂಶಗಳನ್ನು ಸಂಪೂರ್ಣ ವಿವರ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.
ಜಿಲ್ಲಾ ಹಂತದ ಪೊಲೀಸ್ ದೂರು ಪ್ರಾಧಿಕಾರಗಳಿಗೆ ಕಟ್ಟಡ, ಸಿಬ್ಬಂದಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಗಳು ಅನುಷ್ಠಾನದಲ್ಲಿವೆ ಎಂದು ಯಾರಿಗೂ ತಿಳಿಯುತ್ತಿಲ್ಲ. ಈ ಕೇಂದ್ರಗಳಲ್ಲಿ ಯಾವುದೇ ರೀತಿಯ ಕಾರ್ಯಚಟುವಟಿಕೆಗಳು ನಡೆಯುತ್ತಿಲ್ಲ. ಆದ ಕಾರಣ ರಾಜ್ಯ ದೂರು ಪ್ರಾಧಿಕಾರವು ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಗಳನ್ನು ನಿಗಾ ವಹಿಸಬೇಕು ಎಂದು ಆದೇಶಿಸಿತು.
ಕರ್ನಾಟಕ ಬಿಟ್ಟರೆ ಇತರ ರಾಜ್ಯಗಳಲ್ಲಿ ಪ್ರಾಧಿಕಾರ ರಚನೆ ಮಾಡದಿರುವುದನ್ನು ನ್ಯಾಯಪೀಠಕ್ಕೆ ಸರಕಾರದ ಪರ ವಕೀಲರು ತಿಳಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ರಾಜಕೀಯ ಭಾಷಣ ಮಾಡುವುದು ಸರಿಯಾದುದಲ್ಲ. ಸುಪ್ರೀಂ ಕೋರ್ಟ್ ಆದೇಶದಲ್ಲಿ ಕಾನೂನು ತಿದ್ದುಪಡಿ ಮಾಡಲಾಗಿದೆ. ಅದರೆ ಅನುಷ್ಠಾನ ಮಾತ್ರ ಸಾಧ್ಯವಾಗುತ್ತಿಲ್ಲ. ಸರಕಾರಕ್ಕೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಕ್ಕೆ ಕಾಳಜಿ ಇರಬೇಕು. ಅದನ್ನು ಬಿಟ್ಟು ಮತ್ತೊಬ್ಬರ ಒತ್ತಾಯಕ್ಕೆ ಯಾವುದೇ ಕಾರ್ಯವನ್ನು ಮಾಡಬಾರದು ಎಂದು ನ್ಯಾಯಪೀಠ ತಿಳಿಸಿತು.
ಸುಪ್ರೀಂ ಕೋರ್ಟ್‌ಗೆ ಪತ್ರ: ಪ್ರಾಧಿಕಾರ ರಚನೆ ಮಾಡುವಂತೆ ಸರಕಾರಕ್ಕೆ ಸಾಕಷ್ಟು ಸಮಯಾವಕಾಶ ನೀಡಲಾಗಿದೆ. ಆದರೆ, ಇನ್ನು ನಾವೇ(ನ್ಯಾಯಪೀಠ) ಮುಂದೆ ನಿಂತು ಎಲ್ಲವನ್ನು ಕಾರ್ಯಗತ ಮಾಡಿಸುವುದಕ್ಕೆ ಆಗುವುದಿಲ್ಲ್ಲ. ಹೀಗಾಗಿ, ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ಗೆ ಪತ್ರ ಬರೆಯಲಾಗುವುದು ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿತು.





