ವ್ಯಂಗ್ಯಚಿತ್ರಕಾರ ಎಸ್.ವಿ.ಪದ್ಮನಾಭ್ ನಿಧನ

ಬೆಂಗಳೂರು, ಮಾ.9: ನಾಡಿನ ಜನಪ್ರಿಯ ವ್ಯಂಗ್ಯಚಿತ್ರಕಾರ ಎಸ್.ವಿ.ಪದ್ಮನಾಭ್ (54) ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಪದ್ಮನಾಭ ಅವರಿಗೆ ಪತ್ನಿ, ಒಬ್ಬ ಮಗ ಇದ್ದಾರೆ. ಆತ್ಮಹತ್ಯೆಗೆ ನೈಜ ಕಾರಣ ಇನ್ನೂ ತಿಳಿದು ಬಂದಿಲ್ಲ. ಮೃತ ದೇಹದ ಪಂಚನಾಮೆಯು ಕಿಮ್ಸ್ ಆಸ್ಪತ್ರೆಯಲ್ಲಿ ನೆರವೇರಿತು. ಬಳಿಕ ಹುಟ್ಟೂರು ಮೇಳಿಗೆ ಸಮೀಪದ ಕಿರಿಮನೆಗೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗಿದೆ.
ಇಂದು ಅಂತ್ಯಕ್ರಿಯೆ: ಪದ್ಮನಾಭ ಅವರ ಅಂತ್ಯಕ್ರಿಯೆಯು ಗುರುವಾರ ಕಿರಿಮನೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೂಲತಃ ತೀರ್ಥಹಳ್ಳಿ ತಾಲೂಕಿನ ಕಿರಿಮನೆಯವರಾಗಿದ್ದ ಇವರು ಪ್ರಾಥಮಿಕ ಶಾಲೆಯ ವ್ಯಾಸಂಗವನ್ನು ಮೇಳಿಗೆಯಲ್ಲಿ, ಪ್ರೌಢಶಾಲೆ ಹಾಗೂ ಬಿಕಾಂ ಪದವಿಯನ್ನು ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಪೂರೈಸಿದ್ದರು. 1986ರಲ್ಲಿ ತೀರ್ಥಹಳ್ಳಿಯ ಗ್ರಾಮಭಾರತಿ ವಾರಪತ್ರಿಕೆಯಲ್ಲಿ 6 ವರ್ಷ ವ್ಯಂಗ್ಯಚಿತ್ರಕಾರರಾಗಿ ವೃತ್ತಿಜೀವನ ಆರಂಭಿಸಿದ್ದರು. ಅನಂತರ ಉದಯವಾಣಿ, ಹೊಸದಿಗಂತ, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. 2007ರಿಂದ ಕನ್ನಡಪ್ರಭದಲ್ಲಿ ವ್ಯಂಗ್ಯಚಿತ್ರಕಾರರಾಗಿ ಸೇವೆ ಸಲ್ಲಿಸುತ್ತಿದ್ದರು. ರಾಜ್ಯ ಮಟ್ಟದ ವಿವಿಧ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸುವುದರ ಜತೆಗೆ, ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷರಾಗಿ ಕಳೆದ 3 ವರ್ಷದಿಂದ ಯಶಸ್ವಿಯಾಗಿ ಕಾರ್ಯಕ್ರಮ ಸಂಘಟಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ರಾಜಕೀಯ ವ್ಯಂಗ್ಯಚಿತ್ರ ಬರೆಯುತ್ತಿದ್ದ ಕೆಲವೇ ಕೆಲವು ಪ್ರಮುಖರಲ್ಲಿ ಪದ್ಮನಾಭ್ ಕೂಡ ಒಬ್ಬರು. ಪ್ರಭುತ್ವದ ಅಂಕುಡೊಂಕುಗಳಿಗೆ ತಮ್ಮ ಗೆರೆಗಳ ಮೂಲಕ ಬರೆ ಎಳೆಯುತ್ತಿದ್ದರು. ಅನೇಕ ಸಲ ಇವರ ವ್ಯಂಗ್ಯಚಿತ್ರಗಳು ಸದನಗಳಲ್ಲಿ ಪ್ರಸ್ತಾಪಗೊಂಡಿವೆ.





