ರಾಜ್ಯಪಾಲರಿಗೆ ಬಿಜೆಪಿ ಮನವಿ
ವಕ್ಫ್ ಆಸ್ತಿ ಪರಭಾರೆ: ವರದಿ ಮಂಡನೆಗೆ ಆಗ್ರಹ
ಬೆಂಗಳೂರು, ಮಾ. 9: 'ವಕ್ಫ್ ಆಸ್ತಿ' ಅಕ್ರಮ ಪರಭಾರೆ ಸಂಬಂಧ ಅಲ್ಪಸಂಖ್ಯಾತರ ಆಯೋಗದ ಅಂದಿನ ಅಧ್ಯಕ್ಷ ಅನ್ವರ್ ಮಾನ್ಪಾಣಿ ನೀಡಿದ ವರದಿಯನ್ನು ಸದನದಲ್ಲಿ ಮಂಡಿಸದೆ ಸರಕಾರ ತಪ್ಪಿತಸ್ಥರ ರಕ್ಷಣೆಗೆ ಯತ್ನಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಪಾಲರಿಗೆ ಬಿಜೆಪಿ ಮನವಿ ಸಲ್ಲಿಸಿದೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, 2016ರ ಫೆಬ್ರವರಿ ಒಳಗೆ ಮಾಣಿಪ್ಪಾಡಿ ವರದಿ ಮಂಡಿಸಲು ಹೈಕೋರ್ಟ್ ನಿರ್ದೇಶಿಸಿದೆ. ಆದರೂ, ಸರಕಾರ ವರದಿಯನ್ನು ಮಂಡಿಸದೆ ಕ್ರಮ ಕೈಗೊಂಡ ಬಗ್ಗೆ ವರದಿ ನೀಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಕರ್ನಾಟಕ ವಕ್ಫ್ ಮಂಡಳಿಗೆ ಸೇರಿದ ಕೋಟ್ಯಂತರ ರೂ.ಮೊತ್ತದ 57 ಸಾವಿರ ಎಕರೆ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿದ್ದು, ಸಚಿವ ಖಮರುಲ್ ಇಸ್ಲಾಮ್ ಸೇರಿದಂತೆ ಆಡಳಿತದ ಪಕ್ಷದ ಹಲವು ಮುಖಂಡರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಈಶ್ವರಪ್ಪ ಗಂಭೀರ ಆರೋಪ ಮಾಡಿದರು.
ಮಾ.18ರಿಂದ ಆರಂಭಗೊಳ್ಳಲಿರುವ ಬಜೆಟ್ ಅಧಿವೇಶನದಲ್ಲಿ ಈ ವರದಿಯನ್ನು ಮಂಡಿಸಲು ಸಭಾಪತಿ ಡಿ.ಎಚ್.ಶಂಕರಮೂರ್ತಿ ಕ್ರಮ ಕೈಗೊಳ್ಳುವ ಭರವಸೆಯಿದೆ. ಈ ಪ್ರಕರಣದಲ್ಲಿ ನ್ಯಾಯ ದೊರೆಯುವವರೆಗೂ ಹೋರಾಟ ನಿಲ್ಲದು ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿದ್ದ ಅನ್ವರ್ ಮಾನ್ಪಾಣಿ ಮಾತನಾಡಿ, ಸುಮಾರು 18ಲಕ್ಷ ಕೋಟಿ ರೂ.ಗಳಷ್ಟು ಮೊತ್ತದ ವಕ್ಫ್ ಆಸ್ತಿ ಕಬಳಿಕೆಯಾಗಿದೆ. ಸಮುದಾಯದ ಅಭಿವೃದ್ಧಿಗೆ ಬಳಕೆ ಮಾಡಬೇಕಾದ ಆಸ್ತಿ ದುರ್ಬಳಕೆ ಆಗುತ್ತಿದ್ದು, ಅದನ್ನು ರಕ್ಷಿಸುವುದು ನಮ್ಮ ಉದ್ದೇಶ ಎಂದರು.
ಗೋಷ್ಠಿಯಲ್ಲಿ ಮೇಲ್ಮನೆ ವಿಪಕ್ಷದ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್ ಮತ್ತು ಮೇಲ್ಮನೆ ಸದಸ್ಯ ಗೋ.ಮಧುಸೂಧನ್ ಉಪಸ್ಥಿತರಿದ್ದರು.





