ಅಂಬಲಪಾಡಿ: ವಾಹನ ಕಳ್ಳನ ಬಂಧನ
ಉಡುಪಿ, ಮಾ.9: ಕಾಸರಗೋಡು ಜಿಲ್ಲೆಯ ಬದಿಯಡ್ಕ ನಿವಾಸಿ ದ್ವಿಚಕ್ರ ವಾಹನ ಕಳ್ಳನೊಬ್ಬನನ್ನು ಉಡುಪಿ ನಗರ ಠಾಣೆಯ ಪಿಎಸ್ಸೈ ಗಿರೀಶ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ಬಂಧಿತನನ್ನು ಮನೋಹರ್ ಯಾನೆ ಮನು (19) ಎಂದು ಗುರುತಿಸಲಾಗಿದೆ. ಮಂಗಳವಾರ ಅಪರಾಹ್ನ ಅಂಬಲಪಾಡಿ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಹೆಲ್ಮೆಟ್ ಇಲ್ಲದೇ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಸವಾರನನ್ನು ನಿಲ್ಲಿಸಲು ಸೂಚಿಸಿದರೂ ನಿಲ್ಲಿಸದೇ ಹೋಗಲು ಪ್ರಯತ್ನಿಸಿದಾಗ ತಡೆದು ನಿಲ್ಲಿಸಿ ವಾಹನದ ದಾಖಲೆ ಕೇಳಿದಾಗ ಯಾವುದೇ ಸರಿಯಾದ ಮಾಹಿತಿ ನೀಡಲಿಲ್ಲ.
ಮತ್ತೊಮ್ಮೆ ಪೊಲೀಸರು ಆತನನ್ನು ಕೂಲಂಕಷವಾಗಿ ವಿಚಾರಿಸಿದಾಗ ತನ್ನ ಗೆಳೆಯ ಕಾವೂರು ಮರಕಡದ ಮಹೇಂದ್ರ ಜೊತೆ ಸೇರಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದು ತಿಳಿದು ಬಂತು. ಈ ಸ್ಕೂಟರ್‌ನ್ನು ಕಳೆದ ನ.14ರಂದು ಮಂಗಳೂರಿನ ರೂಪವಾಣಿ ಟಾಕೀಸ್ ಬಳಿಯಿಂದ ಕದ್ದಿರುವುದಾಗಿ ತಿಳಿಸಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ಸೊತ್ತನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.





