ಹತ ಪಾಕ್ ರಾಜ್ಯಪಾಲರ ಅಪಹೃತ ಮಗ 5 ವರ್ಷ ಬಳಿಕ ಬಿಡುಗಡೆ
ಲಾಹೋರ್, ಮಾ. 9: ಪಾಕಿಸ್ತಾನದ ಹತ್ಯೆಯಾದ ರಾಜ್ಯಪಾಲರೊಬ್ಬರ ಅಪಹೃತ ಮಗ ಸುಮಾರು ಐದು ವರ್ಷಗಳ ಒತ್ತೆಸೆರೆಯ ಬಳಿಕ ಬುಧವಾರ ತನ್ನ ಕುಟುಂಬವನ್ನು ಸೇರಿದ್ದಾರೆ.
ಆರೋಗ್ಯವಂತರಾಗಿ ಕಂಡುಬಂದ ಶಾಬಾಝ್ ತಸೀರ್‌ರನ್ನು ಲಾಹೋರ್ ವಿಮಾನ ನಿಲ್ದಾಣದಲ್ಲಿ ಅವರ ಸಂಬಂಧಿಕರು ಸ್ವಾಗತಿಸಿದರು.
ಅವರ ತಂದೆಯ ಹಂತಕನನ್ನು ನೇಣಿಗೇರಿಸಿದ ಒಂದು ವಾರದ ಬಳಿಕ ಅವರ ಬಿಡುಗಡೆಯಾಗಿದೆ.
ಆದರೆ, ತಸೀರ್‌ರ ಬಿಡುಗಡೆಗೆ ಸಂಬಂಧಿಸಿದ ವಿವರಗಳು ಗೊಂದಲಮಯವಾಗಿವೆ.
ಮಾಹಿತಿಯೊಂದರ ಆಧಾರದಲ್ಲಿ, ಬಲೂಚಿಸ್ತಾನ್ ಪ್ರಾಂತದ ಕುಚ್ಲಕ್ ಜಿಲ್ಲೆಯ ಕಟ್ಟಡವೊಂದಕ್ಕೆ ತಾವು ದಾಳಿ ನಡೆಸಿದ್ದು, ಅಲ್ಲಿ ತಸೀರ್ ಒಬ್ಬರೇ ಪತ್ತೆಯಾದರು ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಆದಾಗ್ಯೂ, ತಸೀರ್ ಮಂಗಳವಾರ ಸಂಜೆ ತನ್ನ ರೆಸ್ಟೋರೆಂಟ್‌ಗೆ ನಡೆದುಕೊಂಡು ಬಂದರು ಎಂದು ಕುಚ್ಲಕ್‌ನ ರಸ್ತೆ ಬದಿ ರೆಸ್ಟೋರೆಂಟೊಂದರ ಮಾಲಕರು ಹೇಳಿದ್ದಾರೆ.
ಅಲ್ಲಿಗೆ ಬಂದ ತಸೀರ್ ತಿಂಡಿ ತಿಂದು ಫೋನ್ ಮಾಡಿದರು. ಆಗ ಅರೆ ಸೈನಿಕ ಪಡೆ ಫ್ರಂಟಿಯರ್ ಕಾರ್ಪ್ಸ್‌ನ ಸಿಬ್ಬಂದಿ ಬಂದು ಅವರನ್ನು ಕರೆದುಕೊಂಡು ಹೋದರು ಎಂದರು.
ತಸೀರ್‌ರನ್ನು ಬಂದೂಕುಧಾರಿಗಳು 2011ರ ಆಗಸ್ಟ್‌ನಲ್ಲಿ ಲಾಹೋರ್‌ನಿಂದ ಅಪಹರಿಸಿದ್ದರು. ಅದಕ್ಕೂ ಕೆಲವು ತಿಂಗಳುಗಳ ಮೊದಲು ದೇಶದ ವಿವಾದಾಸ್ಪದ ದೈವನಿಂದನೆ ಕಾನೂನುಗಳನ್ನು ವಿರೋಧಿಸಿದ್ದಕ್ಕಾಗಿ ಅವರ ತಂದೆಯನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದರು.





