2 ಅಣು ಸ್ಥಾವರಗಳ ಮುಚ್ಚುಗಡೆಗೆ ಜಪಾನ್ ನ್ಯಾಯಾಲಯ ಆದೇಶ
ಟೋಕಿಯೊ, ಮಾ. 9: ಸುರಕ್ಷತೆಯ ಬಗ್ಗೆ ಕಳವಳ ಇರುವ ಹಿನೆಲೆಯಲ್ಲಿ, ಎರಡು ಪ್ರಾದೇಶಿಕ ಪರಮಾಣು ಸ್ಥಾವರಗಳು ಮುಚ್ಚಬೇಕೆಂದು ಜಪಾನ್‌ನ ನ್ಯಾಯಾಲಯವೊಂದು ಇಂದು ಆದೇಶ ನೀಡಿದೆ.
ಫುಕುಶಿಮ ಪರಮಾಣು ಸ್ಥಾವರ ಅವಗಢದ ಐದನೆ ವಾರ್ಷಿಕ ದಿನಕ್ಕೆ ಕೆಲವೇ ದಿನಗಳು ಬಾಕಿಯಿರುವಾಗ ನ್ಯಾಯಾಲಯದ ಈ ಆದೇಶ ಬಂದಿರುವುದು ಗಮನಾರ್ಹವಾಗಿದೆ.
ಇದರೊಂದಿಗೆ ಜಪಾನ್‌ನಲ್ಲಿ ಕಾರ್ಯಾಚರಿಸಲಿರುವ ಪರಮಾಣು ವಿದ್ಯುತ್ ಸ್ಥಾವರಗಳ ಸಂಖ್ಯೆ ಎರಡಕ್ಕೆ ಇಳಿಯಲಿದೆ. ಐದು ವರ್ಷಗಳ ಹಿಂದೆ ಜಪಾನ್‌ನಲ್ಲಿ ಸಂಭವಿಸಿದ ಭೂಕಂಪ ಹಾಗೂ ಸುನಾಮಿಗಳ ಹಿನ್ನೆಲೆಯಲ್ಲಿ ಡಝನ್‌ಗಟ್ಟಳೆ ಸ್ಥಾವರಗಳನ್ನು ಮುಚ್ಚಲಾಗಿತ್ತು.
ಈಗ ಮುಚ್ಚಲಾಗುತ್ತಿರುವ ಸ್ಥಾವರಗಳನ್ನು 2011ರ ದುರಂತದ ಬಳಿಕ ಕಟ್ಟುನಿಟ್ಟಿನ ಸುರಕ್ಷತಾ ಮಾನದಂಡಗಳಡಿ ಪುನಾರಂಭಿಸಲಾಗಿತ್ತು.
ಒಟ್ಸು ಜಿಲ್ಲಾ ನ್ಯಾಯಾಲಯ ಅಣು ವಿದ್ಯುತ್ ಸ್ಥಾವರದ ಸುತ್ತಮುತ್ತಲಿನ ನಿವಾಸಿಗಳ ಪರವಾಗಿ ನಿಂತಿತು. ಈ ರಿಯಾಕ್ಟರ್‌ಗಳಿಂದ ಪ್ರದೇಶದ ಸುರಕ್ಷತೆಗೆ ಅಪಾಯವಿದೆ ಎಂಬುದಾಗಿ ಸ್ಥಳೀಯರು ಭೀತಿ ವ್ಯಕ್ತಪಡಿಸಿದ್ದರು ಹಾಗೂ ಅವುಗಳ ಮುಚ್ಚುಗಡೆಗಾಗಿ ಕಾನೂನು ಸಮರ ನಡೆಸಿದ್ದರು.





