ಕೇಜ್ರಿವಾಲ್ ಸಹಿತ 6 ಮಂದಿಗೆ ಸಮನ್ಸ್
ಜೇಟ್ಲಿ ಮಾನನಷ್ಟ ಮೊಕದ್ದಮ
ಹೊಸದಿಲ್ಲಿ, ಮಾ.9: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೂಡಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯೊಂದರ ಸಂಬಂಧ ಆರೋಪಿಗಳಾದ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಇತರ ಐವರು ಎಎಪಿ ನಾಯಕರಿಗೆ ಇಲ್ಲಿನ ನ್ಯಾಯಾಲಯವೊಂದು ಸಮನ್ಸ್ ನೀಡಿದೆ.
ಜೇಟ್ಲಿಯವರ ವಿರುದ್ಧ ಮಾಡಲಾಗಿದ್ದ ಆರೋಪಗಳು ‘ಮಾನಹಾನಿಕರ’ ‘ಸುಳ್ಳು ನಿಂದೆ’ ಹಾಗೂ ‘ಮತ್ಸರದಿಂದ’ ಕೂಡಿವೆಯೆಂದು ಅಭಿಪ್ರಾಯಿಸಿರುವ ನ್ಯಾಯಾಲಯ ಎ.7ರಂದು ತನ್ನ ಮುಂದೆ ಹಾಜರಾಗುವಂತೆ ಆರೋಪಿಗಳಿಗೆ ಆದೇಶಿಸಿದೆ. ಆಶುತೋಷ್, ಸಂಜಯ ಸಿಂಗ್, ಕುಮಾರ್ ವಿಶ್ವಾಸ್, ರಾಘವ ಚಂಧ ಹಾಗೂ ದೀಪಕ್ ಬಾಜಪೇಯಿ ಸಮನ್ಸ್ ನೀಡಲಾಗಿರುವ ಇತರ ಎಎಪಿ ನಾಯಕರಾಗಿದ್ದಾರೆ. ಜೇಟ್ಲಿ ವಿರುದ್ಧ ಆರೋಪಿಗಳ ಆರೋಪಗಳು ‘ಕೇವಲ ಅವಮಾನಕರ ಮಾತ್ರವಲ್ಲದೆ, ತೀವ್ರವಾಗಿ ಅಣಕಿಸುವಂತಹವು ಹಾಗೂ ಪ್ರಚೋದನಾತ್ಮಕ’ ಎಂದು ನ್ಯಾಯಾಲಯ ಹೇಳಿದೆ. ತನ್ನ 30 ಪುಟಗಳ ಆದೇಶದಲ್ಲಿ ಅದು, ‘ಪಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರವು ನಿಶ್ಚಿತ ಹಕ್ಕಲ್ಲ. ಅದು ಮಾನನಷ್ಟ ಕಾಯ್ದೆಯು ಪ್ರಧಾನವಾಗಿರುವ ನ್ಯಾಯಬದ್ಧ ನಿರ್ಬಂಧಗಳ ಬೇಲಿಯೊಳಗಿದೆ’ ಎಂದು ಅದು ಸ್ಪಷ್ಟಪಡಿಸಿದೆ.





