ಭಾರತದ ಯುದ್ಧ ವಿಮಾನದ ಪ್ರಪ್ರಥಮ ಮಹಿಳಾ ಪೈಲಟ್‌ಗಳು

ಹೊಸದಿಲ್ಲಿ, ಮಾ.9: ಈ ವರ್ಷ ಜೂನ್‌ನಲ್ಲಿ ದೇಶವು ಪ್ರಪ್ರಥಮ ‘ಯುದ್ಧವಿಮಾನ ಚಾಲಕಿಯರನ್ನು’ ಪಡೆಯಲಿದೆಯೆಂದು ವಾಯು ದಳದ ದಂಡನಾಯಕ ಅರೂಪ್ ರಾಹಾ ಮಂಗಳವಾರ ಘೋಷಿಸಿದ್ದಾರೆ.
ಈಗ ಅದಕ್ಕೆ ಸರಿಯಾದ ಸಮಯವೆಂದಲ್ಲ. ಮಹಿಳೆಯರಿಗೆ ಯುದ್ಧ ವಿಮಾನಗಳ ಪೈಲಟ್‌ಗಳಾಗಲು ಯಾವಾಗಲೂ ಸೂಕ್ತ ಸಮಯವೇ ಆಗಿತ್ತು. ಅದು ಈಗಲಾದರೂ ಅಯಿತಲ್ಲ ಎಂಬ ಸಂತೋಷ ತನಗಾಗಿದೆಯೆಂದು ಬಿಹಾರದ ಭಾವನಾ ಕಾಂತ್ ಹೇಳಿದ್ದಾರೆ. ಅವರು, ಭಾರತದ ಪ್ರಪ್ರಥಮ ಯುದ್ಧ ವಿಮಾನ ಚಾಲಕಿಯರಾಗಲಿರುವ ಮೂವರಲ್ಲಿ ಒಬ್ಬರಾಗಿದ್ದಾರೆ.
ಭಾವನಾರಿಗೆ ಯುದ್ಧ ವಿಮಾನ ಪೈಲಟ್ ಆಗುವುದು ಬಾಲ್ಯದ ಕನಸಾಗಿತ್ತು. ಈ ವರೆಗೆ ಅದು ಹುಡುಗರಷ್ಟೇ ಕನಸು ಕಾಣಬಹುದಾಗಿದ್ದ ಕ್ಷೇತ್ರವಾಗಿತ್ತು.
ಆದರೆ, ತಾನು ಹೆಣ್ಣೆಂಬ ಕಾರಣಕ್ಕಾಗಿ ಯಾವುದೇ ಬೇರೆ ಕ್ಷೇತ್ರವನ್ನು ಆಯ್ಕೆ ಮಾಡುವುದು ಅಗತ್ಯವೆಂಬ ಭಾವನೆ ತನ್ನಲ್ಲಿ ಮೂಡುವುದಕ್ಕೆ ತಂದೆ-ತಾಯಿ ಎಂದೂ ಆಸ್ಪದ ನೀಡಲೇ ಇಲ್ಲವೆಂದು ಭಾವನಾ ಹೇಳಿದ್ದಾರೆ.
ಮೋಹನಾ ಸಿಂಗ್ ವಾಯುಪಡೆಯ ಕುಟುಂಬದಿಂದಲೇ ಬಂದವರಾಗಿದ್ದಾರೆ. ಅವರ ತಂದೆ ಹಾಗೂ ಅಜ್ಜ, ಇಬ್ಬರು ಭಾರತೀಯ ವಾಯುದಳದಲ್ಲಿ ಸೇವೆ ಸಲ್ಲಿಸಿದವರು.
ಆದರೆ, ಅವರು ಸಾರಿಗೆ ವಿಮಾನಗಳಲ್ಲಿದ್ದರು. ಯುದ್ಧ ವಿಮಾನಗಳ ಪೈಲಟ್‌ಗಳಾಗಿರಲಿಲ್ಲ ಎಂದು ಮೋಹನಾ ತಿಳಿಸಿದ್ದು, ವಾಯುದಳವನ್ನು ಸೇರುವುದು ತಮ್ಮ ಕುಟುಂಬದ ಪರಂಪರೆ ಮತ್ತು ಕನಸಾಗಿದೆ ಎಂದಿದ್ದಾರೆ.
ಒಟೆಕ್‌ನ ಬಳಿಕ, ಐಟಿಯಲ್ಲಿ ಉದ್ಯೋಗ ಅರಸುವ ಇತರ ಯುವಕರಂತೆಯೇ ತಾನೂ ಕಾಗ್ನಿಜೆಂಟ್‌ಗೆ ಸೇರಿದ್ದೆ. ಆದರೆ, ಅದರೊಂದಿಗೇ ಸೇನೆಗೆ ಸೇರಲು ಸಿದ್ಧತೆ ನಡೆಸುತ್ತಿದ್ದೆನೆಂದು ಅವರು ತಿಳಿಸಿದ್ದಾರೆ.
ಯುದ್ಧ ವಿಮಾನದ ಪೈಲಟ್ ಆಗುವಂತೆ ತನಗೆ ಸ್ಫೂರ್ತಿ ನೀಡಿದುದು ತನ್ನ ತರಬೇತುದಾರನೆಂದು ಅವರು ಹೇಳಿದ್ದಾರೆ. ಅವಕಾಶ ಸಿಕ್ಕಿದಾಗ ಅದಕ್ಕೆ ಆಯ್ಕೆಯಾಗಲು, ತಮ್ಮ ಬ್ಯಾಚ್‌ನ 8 ಮಂದಿಯಲ್ಲಿ ತಾವು ಮೂವರು ಪಟ್ಟಿ ಮಾಡಲ್ಪಟ್ಟಿದ್ದೆವು. ತಾವು ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದೇವೆಂದು ಮೋಹನಾ ವಿವರಿಸಿದ್ದಾರೆ.
ಮಹಿಳಾ ಫೈಟರ್ ಪೈಲಟ್ ಆಗುವುದರಲ್ಲಿ ವ್ಯತ್ಯಾಸವೇನೂ ಇಲ್ಲ. ಉಭಯ ಲಿಂಗಿಗಳಿಗೂ ಸವಾಲುಗಳು ಸಂಪೂರ್ಣ ಸಮಾನ. ತಾವೂ ಇತರರಂತೆಯೇ ಸ್ಪರ್ಧಿಸಬೇಕಾಗುತ್ತದೆ. ಅಲ್ಲದೆ, ತಮ್ಮನ್ನು ಭಿನ್ನವಾಗಿ ಪರಿಗಣಿಸುವುದನ್ನೂ ತಾವು ಬಯಸುವುದಿಲ್ಲವೆಂದು ಮಧ್ಯಪ್ರದೇಶದ ರೇವಾದ ಅವನಿ ಚತುರ್ವೇದಿ ಹೇಳಿದ್ದಾರೆ.
ಮುಂದಿನ ಜೂ.18ರಂದು ಇವರು ಮೂವರೂ ಭಾರತದ ಪ್ರಪ್ರಥಮ ಯುದ್ಧ ವಿಮಾನ ಚಾಲಕಿಯರಾಗಿ ಸೇವೆಗೆ ನಿಯೋಜನೆಗೊಳ್ಳಲಿದ್ದಾರೆ.
ಅವರನ್ನು ಮಹಿಳಾ ಪೈಲಟ್‌ಗಳಂತಲ್ಲದೆ, ಯುದ್ಧ ವಿಮಾನ ಚಾಲಕಿಯರೆಂದೇ ನಡೆಸಿಕೊಳ್ಳಲಾಗುವುದು. ಮಹಿಳೆಯರು ಯುದ್ಧ ವಿಮಾನಗಳನ್ನು ಆಕಾಶದಲ್ಲಿ ಭೋರ್ಗುಡಿಸಲು ಕಾಯಬೇಕಾಗಿಲ್ಲ. ಅವರು ತಮ್ಮ ಕನಸಲ್ಲೇ ಬದುಕುತ್ತ ಒಂದು ದಿನ ತಾವು ವಿಮಾನ ಚಾಲಕಿಯರಾಗಬೇಕೆಂದು ಬಯಸುವ ಇತರ ಅನೇಕರ ಕನಸಾಗಿಯೂ ಬದುಕಬೇಕೆಂದು ರಾಹಾ ಹಾರೈಸಿದ್ದಾರೆ.





