ಹರ್ಯಾಣ ಮಾನವ ಹಕ್ಕು ಆಯೋಗದಿಂದ ಸಂಬಂಧಿತರಿಗೆ ನೋಟಿಸ್
ಜಾಟ್ ಚಳವಳಿ
ಚಂಡಿಗಡ, ಮಾ.9: ಹರ್ಯಾಣದಲ್ಲಿ ಜಾಟ್ ಮೀಸಲಾತಿ ಚಳವಳಿಯ ವೇಳೆ ನಡೆದಿದ್ದ ಹಿಂಸಾಚಾರವನ್ನು ಸ್ವಯಂ ಪ್ರೇರಿತವಾಗಿ ಪರಿಗಣಿಸಿರುವ ರಾಜ್ಯದ ಮಾನವ ಹಕ್ಕು ಆಯೋಗವು ಇಂದು ಪ್ರತಿಕ್ರಿಯೆ ಕೇಳಿ ಸಂಬಂಧಿತ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಚಳವಳಿಯ ವೇಳೆ ಸೋನಿಪತ್‌ನಲ್ಲಿ ನಡೆದಿದೆಯೆನ್ನಲಾದ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳಗಳ ಬಗ್ಗೆ ತನಗೆ ಯಾವುದೇ ದೂರುಗಳು ಬಂದಿಲ್ಲವೆಂದು ಅದು ಸ್ಪಷ್ಟಪಡಿಸಿದೆ.
ಈ ವರೆಗೆ ತಾವು 9 ಅಧಿಕಾರಿಗಳಿಗೆ ನೋಟಿಸ್ ನೀಡಿದ್ದೇವೆ. ಇಂದು ತಾವು ಎಎಚ್‌ಎಐ, ರೈಲ್ವೇಸ್, ಹರ್ಯಾಣದ ಪರಿಸರ ಮತ್ತು ಅರಣ್ಯ ಸಂರಕ್ಷಣೆಯ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯದ ನೀರಾವರಿಯ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್‌ಗಳನ್ನು ನೀಡಿದ್ದೇವೆಂದು ಆಯೋಗದ ಅಧ್ಯಕ್ಷ ನ್ಯಾ. ವಿಜೇಂದರ್ ಜೈನ್ ಪತ್ರಕರ್ತರಿಗೆ ತಿಳಿಸಿದ್ದಾರೆ.
ಮಾ.4ರಂದು ಹರ್ಯಾಣದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಗೃಹ) ಹಾಗೂ ಮುಖ್ಯಮಂತ್ರಿಯ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಿದ್ದೆವು. ಮುಖ್ಯಮಂತ್ರಿಯ ಪರ ಪ್ರತಿಕ್ರಿಯೆ ನೀಡುವಂತೆ ಅವರ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದೇವೆಂದು ಅವರು ಹೇಳಿದ್ದಾರೆ.
ಜಾಟ್ ಚಳವಳಿಯಿಂದ ರಾಷ್ಟ್ರೀಯ ಹೆದ್ದಾರಿ ತಡೆದಿದ್ದ ಕಾರಣ ಚಂಡಿಗಡ-ದಿಲ್ಲಿಗಳ ನಡುವಿನ ವಿಮಾನ ಪ್ರಯಾಣಿಕರಿಗೆ ಭಾರೀ ದರ ವಿಧಿಸಿದ್ದ ಆರೋಪದಲ್ಲಿ ನಾಗರಿಕ ವಿಮಾನಯಾನ ಮಹಾ ನಿರ್ದೇಶಕ ಹಾಗೂ ನಾಗರಿಕ ವಿಮಾನಯಾನ ಕಾರ್ಯದರ್ಶಿಗಳಿಗೆ ಈ ಮೊದಲೇ ನೋಟಿಸ್ ಕಳುಹಿಸ ಲಾಗಿದೆಯೆಂದು ಜೈನ್ ತಿಳಿಸಿದ್ದಾರೆ.
ಖಾಸಗಿ ವಿಮಾನ ಸಂಸ್ಥೆಯೊಂದರ ಪ್ರತಿನಿಧಿ ತಮ್ಮ ಮುಂದೆ ಹಾಜರಾಗಿದ್ದು, ಇನ್ನೂ ಮೂರು ಸಂಸ್ಥೆಯವರು ಸಮಯಾವಕಾಶ ಕೇಳಿದ್ದಾರೆ. ಅವರು ಹಾಜರಾಗದ ಪಕ್ಷದಲ್ಲಿ ತಾವು ಎಕ್ಸ್‌ಪಾರ್ಟೆ ಆದೇಶ ನೀಡುತ್ತೇವೆಂದು ಅವರು ಹೇಳಿದರು.
ವೇದಿಕೆಯ ಸುರಕ್ಷತೆಯ ಬಗ್ಗೆ ತೃಪ್ತಿಕರ ಉತ್ತರ ನೀಡುವಲ್ಲಿ ಆರ್ಟ್ ಆಫ್ ಲಿವಿಂಗ್ ವಿಫಲ ಹೊಸದಿಲ್ಲಿ,ಮಾ.9: ಯಮುನಾ ನದಿ ತೀರದಲ್ಲಿ ಲಿವಿಂಗ್ ಆಫ್ ಆರ್ಟ್‌ನ ಕಾರ್ಯಕ್ರಮಕ್ಕಾಗಿ ನಿರ್ಮಿಸಲಾಗಿರುವ ಏಳು ಎಕರೆ ವಿಸ್ತಾರದ ಬೃಹತ್ ವೇದಿಕೆಯ ಸುರಕ್ಷತೆಯ ಬಗ್ಗೆ ಸಿಪಿಡಬ್ಲೂಡಿಯು ಕಳವಳಗಳನ್ನು ವ್ಯಕ್ತಪಡಿಸಿದೆ ಎಂದು ದಿಲ್ಲಿ ಸರಕಾರವು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ಕ್ಕೆ ತಿಳಿಸಿದೆ.
ವೇದಿಕೆಯ ಸದೃಢತೆಯನ್ನು ಪರಿಶೀಲಿಸುವಂತೆ ದಿಲ್ಲಿ ಪೊಲೀಸ್ ಇಲಾಖೆಯು ಸಿಪಿಡಬ್ಲೂಡಿಗೆ ಸೂಚಿಸಿತ್ತು ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಕುಳಿತುಕೊಳ್ಳಲು ಪ್ರತ್ಯೇಕ ವೇದಿಕೆಯನ್ನು ನಿರ್ಮಿಸುವಂತೆ ಅದು ಸಲಹೆ ನೀಡಿದೆ ಎಂದು ದಿಲ್ಲಿ ಸರಕಾರದ ಪರ ವಕೀಲರು ಬುಧವಾರ ಕಾರ್ಯಕ್ರಮಕ್ಕೆ ಹಸಿರು ನಿಶಾನೆಯನ್ನು ತೋರಿಸಿದ ಎನ್‌ಜಿಟಿಗೆ ತಿಳಿಸಿದರು.
ಪೂರ್ವ ನಿಗದಿತ ಕಾರ್ಯಕ್ರಮದಂತೆ ಉದ್ಘಾಟನಾ ದಿನವಾದ ಶುಕ್ರವಾರ ಮೋದಿಯವರು ‘ವಿಶ್ವ ಸಂಸ್ಕೃತಿ ಉತ್ಸವ’ದಲ್ಲಿ ಭಾಗಿಯಾಗಲಿದ್ದಾರೆ. ಆದರೆ ಕಾರ್ಯಕ್ರಮವು ಭಾರೀ ವಿವಾದ ಮತ್ತು ಟೀಕೆಗಳಿಗೆ ಕಾರಣವಾದ ನಂತರವೂ ಅವರು ಪಾಲ್ಗೊಳ್ಳಲಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ವೇದಿಕೆಯು ಸುರಕ್ಷಿತವಾಗಿದೆಯೆಂದು ಸ್ಟಕ್ಚರಲ್ ಎಂಜಿನಿಯರ್ ಪ್ರಮಾಣೀಕರಿಸಿದ್ದಾರೆಯೇ ಎನ್ನುವ ಬಗ್ಗೆ ಎನ್‌ಜಿಟಿ ವಿಚಾರಣೆ ವೇಳೆ ತೃಪ್ತಿಕರ ಉತ್ತರ ನೀಡುವಲ್ಲಿ ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನವು ವಿಫಲಗೊಂಡಿತ್ತು ಎಂದು ಮೂಲಗಳು ತಿಳಿಸಿವೆ.
35,000ಕ್ಕೂ ಅಧಿಕ ಸಂಗೀತಕಾರರು ಮತ್ತು ನೃತ್ಯ ಕಲಾವಿದರು ಈ ವೇದಿಕೆಯಲ್ಲಿ ಪ್ರದರ್ಶನಗಳನ್ನು ನೀಡಲಿದ್ದಾರೆ.







