ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮಕ್ಕೆ ಶರತ್ತುಬದ್ಧ ಅನುಮತಿ

ಜೊತೆಗೆ 5 ಕೋಟಿ ರೂ. ದಂಡ
ಹೊಸದಿಲ್ಲಿ, ಮಾ.9: ಅಸುರಕ್ಷಿತ ವೇದಿಕೆ ಮತ್ತು ಪರಿಸರದ ಮೇಲೆ ಪರಿಣಾಮದ ಕಳವಳಗಳಿದ್ದರೂ ಶ್ರೀ ಶ್ರೀ ರವಿಶಂಕರ ಅವರು ಈ ವಾರಾಂತ್ಯದಲ್ಲಿ ಯಮುನಾ ನದಿಯ ತೀರದಲ್ಲಿ ಆಯೋಜಿಸಿರುವ ‘ವಿಶ್ವ ಸಂಸ್ಕೃತಿ ಉತ್ಸವ’ದ ಬೃಹತ್ ಕಾರ್ಯಕ್ರಮ ನಿಗದಿಯಾಗಿರುವಂತೆ ನಡೆಯಲಿದೆ. ದಂಡ ಮತ್ತು ಕೆಲವು ಶರತ್ತುಗಳನ್ನು ವಿಧಿಸುವ ಮೂಲಕ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ವು ಬುಧವಾರ ಕಾರ್ಯಕ್ರಮಕ್ಕೆ ಹಸಿರು ನಿಶಾನೆಯನ್ನು ತೋರಿಸಿದೆ.
ಈ ಕಾರ್ಯಕ್ರಮವು ಯಮುನಾ ನದಿಯ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ತೀವ್ರ ಹಾನಿಯನ್ನುಂಟು ಮಾಡಲಿದೆ ಎಂಬ ಕಳವಳವನ್ನು ವ್ಯಕ್ತಪಡಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸಂದರ್ಭ ಕಳೆದೆರಡು ದಿನಗಳ ಕಾಲ ವಿವಿಧ ರಾಜ್ಯ ಮತ್ತು ಕೇಂದ್ರೀಯ ಸಂಸ್ಥೆಗಳ ಮುಂದೆ ಕಠಿಣ ಪ್ರಶ್ನೆಗಳನ್ನಿಟ್ಟಿದ್ದ ಎನ್‌ಜಿಟಿಯು ಶ್ರೀ ಶ್ರೀಗಳ ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನಕ್ಕೆ ಐದು ಕೋ.ರೂ.ಗಳ ದಂಡವನ್ನು ವಿಧಿಸಿದೆ.
ಐದು ಲಕ್ಷ ರೂ.ಗಳ ದಂಡವನ್ನು ತೆರುವಂತೆ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಆದೇಶಿಸಿರುವ ನ್ಯಾಯಾಧಿಕರಣವು ಭವಿಷ್ಯದಲ್ಲಿ ಈ ರೀತಿಯಲ್ಲಿ ಪರವಾನಿಗೆಗಳನ್ನು ನೀಡದಂತೆ ಅದಕ್ಕೆ ತಾಕೀತು ಮಾಡಿದೆ.
ಯೋಗ ಮತ್ತು ಧ್ಯಾನ ಅಧಿವೇಶನಗಳು,ಶಾಂತಿ ಪ್ರಾರ್ಥನೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡಿರುವ ಮೂರು ದಿನಗಳ ವಿಶ್ವ ಸಂಸ್ಕೃತಿ ಉತ್ಸವವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಆದರೆ ಅವರ ಸುರಕ್ಷತೆಯ ಹೊಣೆಯನ್ನು ಹೊತ್ತಿರುವ ಎಸ್‌ಪಿಜಿಯು ಭದ್ರತಾ ಕಳವಳಗಳನ್ನು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿಯವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ಕಾರ್ಯಕ್ರಮಕ್ಕಾಗಿ ನಿರ್ಮಿಸಲಾಗಿರುವ ಏಳು ಎಕರೆ ವಿಸ್ತೀರ್ಣದ ವೇದಿಕೆಯು ಸುರಕ್ಷಿತವಾಗಿಲ್ಲ ಮತ್ತು ಪ್ರಧಾನಿ ಹಾಗೂ ಇತರ ವಿಐಪಿಗಳಿಗಾಗಿ ಪ್ರತ್ಯೇಕ ವೇದಿಕೆಯನ್ನು ನಿರ್ಮಿಸಬೇಕು ಎಂದು ತಜ್ಞರ ಸಮಿತಿಯೊಂದು ಪೊಲೀಸರಿಗೆ ತಿಳಿಸಿದೆ.
ಆರು ಫುಟ್ಬಾಲ್ ಮೈದಾನಗಳಷ್ಟು ವಿಶಾಲವಾಗಿರುವ ವೇದಿಕೆಯ ಜೊತೆಗೆ ಹಲವಾರು ತಾತ್ಕಾಲಿಕ ಸೇತುವೆಗಳು,ಮೊಬೈಲ್ ಗೋಪುರಗಳು ಮತ್ತು ಪಾರ್ಕಿಂಗ್ ಪ್ರದೇಶ ಕೂಡ ತಲೆಯೆತ್ತಿವೆ. ಯಮುನಾ ತೀರದ ಸಾವಿರ ಎಕರೆಗೂ ಅಧಿಕ ಪ್ರದೇಶವನ್ನು ಹಂಗಾಮಿ ಗ್ರಾಮವಾಗಿ ಪರಿವರ್ತಿಸಲಾಗಿದೆ.
ಈ ಬೃಹತ್ ಕಾರ್ಯಕ್ರಮಕ್ಕೆ ನೀಡಲಾದ ಅನುಮತಿಗಳ ಬಗ್ಗೆ ವಿಚಾರಣೆ ಸಂದರ್ಭ ಎನ್‌ಜಿಟಿಯು,ದಿಲ್ಲಿಯಲ್ಲಿ...ವಿಶೇಷವಾಗಿ ನೆರೆ ನೀರಿನ ಹರವು ಬಯಲಿನಲ್ಲಿ ಇಂತಹ ಮತ್ತು ಇಷ್ಟೊಂದು ಭಾರೀ ನಿರ್ಮಾಣ ಚಟುವಟಿಕೆ ಈ ಹಿಂದೆಂದಾದರೂ ನಡೆದಿತ್ತೇ ಎಂದು ಸರಕಾರವನ್ನು ಪ್ರಶ್ನಿಸಿತ್ತು.
ಜಲ ಸಂಪನ್ಮೂಲ ಸಚಿವಾಲಯ ಹಾಗೂ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳು ತಾವು ಈ ಕಾರ್ಯಕ್ರಮಕ್ಕೆ ಅನುಮತಿಯನ್ನು ನೀಡಿಲ್ಲ ಎಂದು ಎನ್‌ಜಿಟಿಗೆ ತಿಳಿಸಿದ್ದವು.
ಕಾರ್ಯಕ್ರಮಕ್ಕೆ ಅನುಮತಿಗೆ ಸಂಬಂಧಿಸಿದಂತೆ ಮತ್ತು ಸಿದ್ಧತೆಯಲ್ಲಿ ಸೇನೆಯಂತಹ ಸಂಪನ್ಮೂಲಗಳ ಬಳಕೆ ಕುರಿತಂತೆ ಸರಕಾರವು ಸಂಸತ್ತಿನಲ್ಲಿ ಪ್ರತಿಪಕ್ಷಗಳ ಪ್ರತಿಭಟನೆಯನ್ನೂ ಎದುರಿಸಬೇಕಾಗಿತ್ತು.







