ಬಿಜೆಪಿ ಸಂಸದೆಯನ್ನು ಮೃತಳೆಂದು ತೋರಿಸಿದ ವಿಕಿ ಪೀಡಿಯಾ!
ಸರಕಾರದಿಂದ ಕಠಿಣ ಕ್ರಮದ ಭರವಸೆ
ಹೊಸದಿಲ್ಲಿ, ಮಾ.9: ವಿಕಿಪಿಡಿಯಾವು ತನ್ನನ್ನು ಮೃತಳಾಗಿದ್ದೇನೆಂದು ತೋರಿಸಿದೆಯೆಂದು ಬಿಜೆಪಿ ಸಂಸದೆಯೊಬ್ಬರು ಲೋಕಸಭೆಯಲ್ಲಿಂದು ಆರೋಪಿಸಿದ್ದು, ಸದಸ್ಯರೆಲ್ಲ ಕಳವಳಗೊಂಡರೆ, ಸರಕಾರವನ್ನು ಗಂಭೀರ ಕ್ರಮದ ಭರವಸೆ ನೀಡುವಂತೆ ಪ್ರಚೋದಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅಂಜು ಬಾಲಾಸ, ಕಳೆದ ವಾರ ಮುಂಬೈಯಲ್ಲಿ ತಾನೊಂದು ಮಹಿಳಾ ಸಮ್ಮೇಳನದಲ್ಲಿ ಭಾಗವಹಿಸಿದ್ದೆ. ಅಲ್ಲಿಂದ ತನ್ನ ಕಾರ್ಯದರ್ಶಿಗೆ ದೂರವಾಣಿ ಕರೆಯೊಂದು ಬಂದ ಮೇಲೆಯೇ, ಸಾಮಾಜಿಕ ಮಾಧ್ಯಮದಲ್ಲಿ ತಾನು ‘ಮೃತಳಾಗಿದ್ದೇನೆಂದು’ ನಮೂದಿಸಿರುವುದು ತನಗೆ ತಿಳಿದು ಬಂದಿತೆಂದು ಹೇಳಿದರು.
ಸಂಸದೆ ಅಂಜು, ಮಾ.3ರಂದು ದಿಲ್ಲಿಯಲ್ಲಿ ನಿಧನರಾಗಿದ್ದಾರೆಂದು ವಿಕಿಪಿಡಿಯಾ ತೋರಿಸಿದೆ. ಅಂದ ಮೇಲೆ, ಅವರು ಕವಿತೆಯೊಂದನ್ನು ಹಾಡಿದ್ದ ಆ ಕಾರ್ಯಕ್ರಮ ಬಹಳ ಹಿಂದೆ ನಡೆದುದೇ? ಎಂದು ಕರೆ ಮಾಡಿದವರು ಪ್ರಶ್ನಿಸಿದರು.
ಅಲ್ಲದೆ, ವಿಕಿಪಿಡಿಯಾದಲ್ಲಿ ತನ್ನ ವ್ಯಕ್ತಿತ್ವ ಹಾಗೂ ವರ್ಚಸ್ಸಿಗೆ ಹಾನಿ ಮಾಡುವ ಕೆಲವು ಪ್ರತಿಪಾದನೆಗಳಿವೆಯೆಂದು ಅಂಜು ಆರೋಪಿಸಿದರು.
ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿ, ಅವರನ್ನು ಕಟಕಟೆಗೆ ತರಬೇಕೆಂದೂ ಅವರು ಆಗ್ರಹಿಸಿದರು.
ಸದಸ್ಯರೆತ್ತಿದ ಕಳವಳದ ನಡುವೆಯೇ, ಘಟನೆಯನ್ನು ಕೇವಲ ನಿನ್ನೆಯಷ್ಟೇ ತನ್ನ ಗಮನಕ್ಕೆ ತರಲಾಗಿದೆಯೆಂದು ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ತಿಳಿಸಿದರು.
ಕಳವಳಕ್ಕೆ ಸ್ಪಂದಿಸಿದ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ, ಇದು ಖಂಡಿತವಾಗಿಯೂ ಗಂಭೀರ ವಿಚಾರವಾಗಿದೆ. ತಾವು ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳುತ್ತೇವೆಂದು ಭರವಸೆ ನೀಡಿದರು.





