ಇಸ್ರೋದಿಂದ ಇಂದು ಆರನೆ ಪಥದರ್ಶಕ ಉಪಗ್ರಹ ಉಡಾವಣೆ
ಚೆನ್ನೈ,ಮಾ.9: ಇಸ್ರೋ ಗುರುವಾರ ಸಂಜೆ ತನ್ನ ಆರನೆ ಪಥದರ್ಶಕ ಉಪಗ್ರಹ ಐಆರ್‌ಎನ್‌ಎಸ್‌ಎಸ್-1ಎಫ್‌ನ ಉಡಾವಣೆಗೆ ಸಜ್ಜಾಗಿದೆ. ಭಾರತದ ವಿಶ್ವಾಸಪಾತ್ರ ರಾಕೆಟ್ ಪಿಎಸ್‌ಎಲ್‌ವಿ-ಸಿ32 ಮೂಲಕ ನಡೆಯಲಿರುವ ಉಪಗ್ರಹ ಉಡಾವಣೆಗೆ 54 ಗಂಟೆಗಳ ಕ್ಷಣಗಣನೆ ಮಂಗಳವಾರದಿಂದ ಆರಂಭಗೊಂಡಿದ್ದು, ಎಲ್ಲವೂ ಯೋಜಿತ ರೀತಿಯಲ್ಲಿ ನಡೆಯುತ್ತಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದರು.
ಇದು ಪಿಎಸ್‌ಎಲ್‌ವಿ-ಸಿ32ರ 34ನೆ ಅಭಿಯಾನವಾಗಿದೆ. ಇಲ್ಲಿಂದ 110 ಕಿ.ಮೀ.ದೂರದಲ್ಲಿರುವ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರವು ಉಪಗ್ರಹ ಉಡಾವಣೆಗಾಗಿ ಸರ್ವಸನ್ನದ್ಧಗೊಂಡಿದೆ.
ಐಆರ್‌ಎನ್‌ಎಸ್‌ಎಸ್-1 ಎಫ್‌ನ ಉಡಾವಣೆಯು ಅಮೆರಿಕ ಮೂಲದ ಜಿಪಿಎಸ್‌ಗೆ ಸರಿಸಮನಾದ ನಿಖರತೆಯೊಂದಿಗೆ ಪಥದರ್ಶಕ ಸೌಲಭ್ಯವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಜಿಪಿಎಸ್‌ಗೆ ಸರಿಸಮವಾದ ಸ್ವತಂತ್ರ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯನ್ನು ಒದಗಿಸಲು ಇಸ್ರೋ ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ(ಐಆರ್‌ಎನ್‌ಎಸ್‌ಎಸ್)ಯ ಅಡಿ ಈಗಾಗಲೇ ಐದು ಪಥದರ್ಶಕ ಉಪಗ್ರಹಗಳನ್ನು ಯಶಸ್ವಿಯಾಗಿ ನಿಗದಿತ ಕಕ್ಷೆಯಲ್ಲಿ ಸೇರಿಸಿದೆ.
ಐಆರ್‌ಎನ್‌ಎಸ್‌ಎಸ್‌ನ ಕಾರ್ಯಾಚರಣೆಯನ್ನು ಆರಂಭಿಸಲು ನಾಲ್ಕು ಉಪಗ್ರಹಗಳು ಸಾಕಾಗಿದ್ದರೂ,ಉಳಿದ ಮೂರು ಉಪಗ್ರಹಗಳು ಹೆಚ್ಚಿನ ನಿಖರತೆ ಮತ್ತು ದಕ್ಷತೆಯನ್ನು ಒದಗಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದರು.
ಸರಣಿಯಲ್ಲಿ ಕೊನೆಯದಾದ ಏಳನೆ ಪಥದರ್ಶಕ ಉಪಗ್ರಹವು ಈ ತಿಂಗಳ ಅಂತ್ಯದಲ್ಲಿ ಉಡಾವಣೆಗೊಳ್ಳುವ ನಿರೀಕ್ಷೆಯಿದೆ ಎಂದರು.





