ಜಾಟ್ ಚಳವಳಿಯಿಂದ ರೈಲ್ವೆಗೆ ರೂ.55.9ಕೋಟಿ ನಷ್ಟ: ಪ್ರಭು

ಹೊಸದಿಲ್ಲಿ, ಮಾ.9: ಇತ್ತೀಚೆಗೆ ನಡೆದಿದ್ದ ಜಾಟ್ ಮೀಸಲಾತಿ ಚಳವಳಿಯ ವೇಳೆ, ಆಸ್ತಿ ಹಾನಿ, 2,314 ರೈಲುಗಳ ರದ್ದತಿ ಹಾಗೂ ಟಿಕೆಟ್ ರದ್ದತಿಗಳಿಂದಾಗಿ ರೈಲ್ವೆಗೆ ರೂ.55.9ಕೋಟಿಯಷ್ಟು ನಷ್ಟವಾಗಿದೆಯೆಂದು ರೈಲ್ವೆ ಸಚಿವ ಸುರೇಶ್ ಪ್ರಭು ಇಂದಿಲ್ಲಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದ ಅವರು, ಫೆ.12ರಿಂದ 24ರವರೆಗಿನ ಸಕ್ರಿಯ ಚಳವಳಿಯ ಅವಧಿಯಲ್ಲಿ 2,134 ರೈಲುಗಳನ್ನು (1,033 ಮೇಲ್/ಎಕ್ಸ್‌ಪ್ರೆಸ್) ಹಾಗೂ 1,101 ಪ್ಯಾಸೆಂಜರ್‌ಸಂಪೂರ್ಣವಾಗಿ ರದ್ದುಪಡಿಸಲಾಗಿತ್ತು ಹಾಗೂ 259 ಮೇಲ್/ಎಕ್ಸ್‌ಪ್ರೆಸ್ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿತ್ತೆಂದು ಹೇಳಿದರು.
ಇದರ ಹೊರತಾಗಿ, 430 ರೈಲುಗಳನ್ನು (229 ಮೇಲ್/ಎಕ್ಸ್‌ಪ್ರೆಸ್ ಹಾಗೂ 201 ಪ್ಯಾಸೆಂಜರ್) ಭಾಗಶಃ ರದ್ದುಪಡಿಸಲಾಗಿತ್ತೆಂದು ಪ್ರಭು ತಿಳಿಸಿದರು.
ರೈಲ್ವೆಗಳಲ್ಲಿ ಪೊಲೀಸಿಂಗ್ ರಾಜ್ಯ ಸರಕಾರಗಳ ಹೊಣೆಯಾಗಿದೆ. ರೈಲ್ವೆಯ ಆವರಣಗಳಲ್ಲಿ ಹಾಗೂ ರೈಲುಗಳಲ್ಲಿ ಅಪರಾಧ ತಡೆ, ಮೊಕದ್ದಮೆ ದಾಖಲು, ಅವುಗಳ ತನಿಖೆ ರಾಜ್ಯ ಪೊಲೀಸರ ಕಾಯ್ದೆ ಬದ್ಧ ಹೊಣೆಗಾರಿಕೆಯಾಗಿದೆ. ಅವರದನ್ನು ಸಂಬಂಧಿತ ರಾಜ್ಯಗಳ ಸರಕಾರಿ ರೈಲ್ವೆ ಪೊಲೀಸರ ಮುಖಾಂತರ ನಡೆಸಬೇಕೆಂದು ಸಚಿವ ಹೇಳಿದರು.
ಆದಾಗ್ಯೂ, ಬಾಧಿತ ಪ್ರದೇಶಗಳಲ್ಲಿ ಪ್ರಮುಖ ರೈಲುಗಳಿಗೆ ಬೆಂಗಾವಲು ನೀಡಲು ಹಾಗೂ ಪ್ರಮುಖ ಹಾಗೂ ಸೂಕ್ಷ್ಮ ನಿಲ್ದಾಣಗಳಲ್ಲಿ ಪ್ರವೇಶಾಧಿಕಾರ ನಿಯಂತ್ರಣ ಕರ್ತವ್ಯಗಳಿಗೆ ತನ್ನ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ರೈಲ್ವೆ ಸುರಕ್ಷಾ ಬಲವು ಜಿಆರ್‌ಪಿಯ ಪ್ರಯತ್ನಕ್ಕೆ ಸಹಾಯ ನೀಡುತ್ತದೆಂದು ಅವರು ತಿಳಿಸಿದರು.





