ಕಾನ್ಶೀರಾಂ ಜನ್ಮದಿನಾಚರಣೆಗೆ ಕೇಜ್ರಿಗೆ ಸ್ವಾಗತ, ಮಾಯಾವತಿಗಿಲ್ಲ ಆಹ್ವಾನ!
ಲಕ್ನೊ, ಮಾ.9 : ಬಿಎಸ್ಪಿ ಅಧ್ಯಕ್ಷೆ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ತಮ್ಮ ಗುರು ಕಾನ್ಶಿರಾಂ ಅವರ ಸ್ಮಾರಕಕ್ಕೆ ಅವರ ತಾತನ ಹಳ್ಳಿಯಾದ ರೋಪರ್‌ನಲ್ಲಿ ಶಿಲಾನ್ಯಾಸ ನೆರವೇರಿಸಿದ 19 ವರ್ಷಗಳ ನಂತರ ಈ ಸ್ಮಾರಕದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾನ್ಶೀರಾಂ ಸಹೋದರಿ ಸ್ವರಣ್ ಕೌರ್ ಮಾಯಾವತಿಯವರನ್ನು ಸ್ಮಾರಕ ಸಂದರ್ಶಿಸದಂತೆ ತಡೆದಿದ್ದರೆ, ಇನ್ನೊಂದು ಬೆಳವಣಿಗೆಯಲ್ಲಿ ಈ ಕಟ್ಟಡದಲ್ಲಿ ದಿಲ್ಲಿ ಮುಖ್ಯಮಂತ್ರಿ ಹಾಗೂ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಭವ್ಯ ಸ್ವಾಗತ ನೀಡಲು ಎಲ್ಲಾ ತಯಾರಿ ನಡೆಸಲಾಗುತ್ತಿದೆ. ಕೇಜ್ರಿವಾಲ್ ಮಾರ್ಚ್ 15ರಂದು ನಡೆಯಲಿರುವ ಕಾನ್ಶೀರಾಂ ಅವರ 82ನೇ ಜನ್ಮದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಅದೇ ದಿನ ಮಾಯಾವತಿ ಅಲ್ಲಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ನವಾನ್ ಶಹರ್ ಗ್ರಾಮದಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಪಂಜಾಬ್‌ನಲ್ಲಿ ಚುನಾವಣೆಗಳು 2017ರಲ್ಲಿ ನಡೆಯಲಿದ್ದು ರಾಜ್ಯದ ಜನಸಂಖ್ಯೆಯ ಶೇ.32ರಷ್ಟಿರುವ ದಲಿತರ ಮತಗಳು ಯಾವುದೇ ಪಕ್ಷಕ್ಕೆ ನಿರ್ಣಾಯಕವಾಗುವ ಸಂಭವವಿರುವುದರಿಂದ ದಲಿತರ ನಾಯಕನೆಂದೇ ಪ್ರತಿಬಿಂಬಿತವಾಗಿರುವ ಕಾನ್ಶೀರಾಂ ಅವರ ಜನ್ಮದಿನಾಚರಣೆ ಮಹತ್ವ ಪಡೆದುಕೊಂಡಿದೆ.
‘‘ಮಾಯಾವತಿ ನನ್ನ ವೈರಿ ನಂ.1. ಆಕೆ ನನ್ನ ಸಹೋದರನನ್ನು ಕೂಡಿ ಹಾಕಿ ಆತನ ಕುಟುಂಬ ಸದಸ್ಯರು ಆತನನ್ನು ಭೇಟಿ ಮಾಡಲು ಬಿಡದೆ ಇಳಿ ವಯಸ್ಸಿನಲ್ಲಿ ಆತನನ್ನು ಕೊಂದು ಬಿಟ್ಟರು. ನನ್ನ ತಾಯಿ ಕೂಡ ಮಗನ ಸಾವಿಗೆ ಕೊರಗುತ್ತಾ ಇಹಲೋಕ ತ್ಯಜಿಸಿದರು. ಆಕೆ ಸೇತುವೆಯನ್ನು ದಾಟಿ ಈ ಹಳ್ಳಿಗೆ ಕಾಲಿಡಬಾರದು. ಈ ವಿಷಯವನ್ನು ಮುಚ್ಚಿ ಹಾಕಬೇಕೆಂದು ನಮಗೆ ಮೂರು ತಿಂಗಳ ಹಿಂದೆಯೇ ಆಕೆಯಿಂದ ಸಂಜ್ಞೆ ಬಂದಿದೆ. ಆದರೆ ನಾವು ಕೇಜ್ರಿವಾಲ್ ಅವರನ್ನು ಸ್ವಾಗತಿಸುತ್ತೇವೆ,’’ ಎಂದಿದ್ದಾರೆ 70 ವರ್ಷದ ಕೌರ್.
‘‘ವಾರಣಾಸಿಯಲ್ಲಿ ನಡೆದ ರವಿದಾಸ್ ಜಯಂತಿ ಸಮಾರಂಭದಲ್ಲಿ ನನ್ನ ಬಗ್ಗೆ ತಿಳಿದು ಕೊಂಡ ಕೇಜ್ರಿವಾಲ್ ಅಲ್ಲಿ ನನ್ನನ್ನು ಭೇಟಿಯಾಗಿ ನಂತರ ಅವರನ್ನು ಭೇಟಿ ಮಾಡಲು ನನಗೆ ಆಹ್ವಾನವಿತ್ತರು. ನಾವು ವೀರ್‌ಜಿಯವರ ಜನ್ಮದಿನಾಚರಣೆಯ ಬಗ್ಗೆ ಹೇಳಿದಾಗ ಸಮಾರಂಭಕ್ಕೆ ಬರುವುದಾಗಿ ಅವರು ತಿಳಿಸಿದರು,’’ ಎಂದು ಆಕೆ ಹೇಳಿದರು.







