ಮನುಸ್ಮೃತಿ ಸುಟ್ಟ ಜೆಎನ್‌ಯು ಎಬಿವಿಪಿ ಮುಖಂಡರು!
ತಾರತಮ್ಯ, ದಮನಕಾರಿ ನೀತಿಯ ವಿರುದ್ಧ ಆಕ್ರೋಶ

ಹೊಸದಿಲ್ಲಿ,ಮಾ.9: ಜೆಎನ್‌ಯು ವಿದ್ಯಾರ್ಥಿಗಳ ಪಾಲಿಗೆ ಶತಮಾನಗಳಷ್ಟು ಪುರಾತನವಾದ ಧರ್ಮಗ್ರಂಥಗಳು ಇನ್ನೂ ಭಾರತೀಯ ಸಮಾಜದಲ್ಲಿನ ತಪ್ಪುಗಳ ಸಂಕೇತವಾಗಿಯೇ ಉಳಿದುಕೊಂಡಿವೆ. ಈ ವಿದ್ಯಾರ್ಥಿಗಳ ನಾಯಕರಲ್ಲಿ ಹೆಚ್ಚಿನವರು ಕ್ಯಾಂಪಸ್ ಪ್ರವೇಶಕ್ಕೆ ಮುನ್ನ ಹೆಚ್ಚಿನ ಧರ್ಮಗ್ರಂಥಗಳ ಹೆಸರುಗಳನ್ನೂ ಕೇಳಿದವರಲ್ಲ ಎನ್ನುವುದು ಕಟು ವಾಸ್ತವ. ಮಂಗಳವಾರ ಸಂಜೆ ಎಬಿವಿಪಿಯ ಜೆಎನ್‌ಯು ಘಟಕದ ಉಪಾಧ್ಯಕ್ಷ ಜತಿನ್ ಗೋರೈಯಾ ಸೇರಿದಂತೆ ಜೆಎನ್‌ಯುನ ಮೂವರು ವಿದ್ಯಾರ್ಥಿಗಳು ಮನುಸ್ಮತಿಯಲ್ಲಿನ ದಮನಕಾರಿ ಮತ್ತು ಅತ್ಯಂತ ತಾರತಮ್ಯಕಾರಿ ವಿಷಯವನ್ನು ವಿರೋಧಿಸಿ ಅದರ ಆಯ್ದ ಕೆಲವು ಭಾಗಗಳನ್ನು ಸುಟ್ಟು ಹಾಕಿದ್ದಾರೆ.
ಮಹಿಳೆಯರ ವಿರುದ್ಧ ಅವಮಾನಕಾರಿ ಹೇಳಿಕೆಗಳಿದ್ದ ಮನುಸ್ಮತಿಯಲ್ಲಿನ ಸುಮಾರು 40 ಶ್ಲೋಕಗಳ ಪ್ರಿಂಟ್ ಔಟ್‌ನ್ನು ತೆಗೆದು ಅವುಗಳನ್ನು ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಂಗಳವಾರ ಸುಟ್ಟು ಹಾಕಿದ್ದೇವೆ ಎಂದು ಗೋರೈಯಾ ತಮ್ಮ ಕೃತ್ಯಕ್ಕೆ ಕಾರಣವನ್ನು ವಿವರಿಸಿದರು.ವಿವಿ ಆವರಣದಲ್ಲಿ ಮನುಸ್ಮತಿ ದಹನವು ಸಾಂಕೇತಿಕ ವೌಲ್ಯ ವನ್ನು ಹೊಂದಿದೆ ಎಂದು ನೀವೇಕೆ ಭಾವಿಸಿದ್ದೀರಿ ಎಂಬ ಪ್ರಶ್ನೆಗೆ ಅವರು,ತಾನು ಜೆಎನ್‌ಯು ಕ್ಯಾಂಪಸ್‌ಗೆ ಬಂದಾಗ ತನಗೂ ಮನುಸ್ಮತಿಯ ಬಗ್ಗೆ ತಿಳಿದಿರಲಿಲ್ಲ,ಆದರೆ ನಂತರ ಅದರ ಬಗ್ಗೆ ತಿಳಿದುಕೊಂಡೆ. ಮನುಸ್ಮತಿಯಲ್ಲಿ ಉಲ್ಲೇಖಿಸಲಾಗಿರುವ ಬಾಲ್ಯವಿವಾಹದಂತಹ ಅನೇಕ ಸಾಮಾಜಿಕ ಪಿಡುಗುಗಳು ಇಂದಿಗೂ ನಮ್ಮ ಸಮಾಜದಲ್ಲಿ ಜೀವಂತವಾಗಿವೆ ಎಂದು ಅವರು ಉತ್ತರಿಸಿದರು. ಮನುಸ್ಮತಿಯನ್ನು ಸುಡುವ ಮೂಲಕ ನಾವು ತಾರತಮ್ಯವನ್ನು ಸುಡುತ್ತಿದ್ದೇವೆ ಎಂದರು.
ಕನ್ಹಯ್ಯ ಕುಮಾರ್ ಬಂಧನ ಮತ್ತು ನಂತರದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಎಬಿವಿಪಿಗೆ ರಾಜೀನಾಮೆ ನೀಡಿರುವ ಪ್ರದೀಪ್ ನರ್ವಾಲ್ ಅವರು ‘‘ಮನುಸ್ಮತಿಯನ್ನು ಸುಟ್ಟು ಹಾಕುವಂತೆ ನಾವೆಲ್ಲ ಎಬಿವಿಪಿಯನ್ನು ಒತ್ತಾಯಿಸುತ್ತಿದ್ದೆವು, ಆದರೆ ಅದು ಕಿವಿಗೊಟ್ಟಿರಲಿಲ್ಲ. ಆ ಗ್ರಂಥದಲ್ಲಿಯ 40 ಅಂಶಗಳ ಬಗ್ಗೆ ನಮಗೆ ಅಸಮಾಧಾನವಿದೆ. ನಾವು ಸುಟ್ಟು ಹಾಕಿರುವ ಭಾಗಗಳು ಮಹಿಳೆಯರು ಮತ್ತು ದಲಿತರ ವಿರುದ್ಧ ಅತ್ಯಂತ ಅವಮಾನಕಾರಿ ಉಲ್ಲೇಖಗಳನ್ನು ಹೊಂದಿದ್ದವು ಎಂದು ವಿವರಿಸಿದರು.







