ಬೀಫ್ ಬ್ಯಾನ್ ಬಗ್ಗೆ ಮಾತನಾಡಿದರೆ ನಾವು ಕೆಲಸ ಕಳೆದುಕೊಳ್ಳಬೇಕಾಗುತ್ತದೆ
ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್
ಮುಂಬೈ, ಮಾ.9: ಸಾಮಾಜಿಕ ವಿಭಜನೆಗಳು ಅಭಿವೃದ್ಧಿ ಪ್ರಕ್ರಿಯೆಗೆ ತೊಡಕಾಗುವುದೆಂದು ಇತ್ತೀಚೆಗಷ್ಟೇ ಎಚ್ಚರಿಸಿದ್ದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯನ್ ಇದೀಗ ತಮಗೆ ‘ಕೆಲಸ ಕಳೆದುಕೊಳ್ಳಲು’ ಇಷ್ಟವಿಲ್ಲವೆಂದು ಹೇಳಿ ಗೋಮಾಂಸ ನಿಷೇಧ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸಲು ನಿರಾಕರಿಸಿದರು.
‘‘ನಾನು ಈ ಪ್ರಶ್ನೆಗೆ ಉತ್ತರಿಸಿದರೆ ನನ್ನ ಕೆಲಸ ಕಳೆದುಕೊಳ್ಳುತ್ತೇನೆ ಎಂದು ನಿಮಗೆ ಗೊತ್ತಿರಬಹುದು. ಆದರೂ ಈ ಪ್ರಶ್ನೆ ಕೇಳಿದ್ದಕ್ಕೆ ನಿಮಗೆ ಧನ್ಯವಾದಗಳು,’’ ಎಂದು ಮುಂಬೈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದರು.
ಗೋಮಾಂಸ ನಿಷೇಧದಿಂದಾಗಿ ರೈತರ ಆದಾಯ ಅಥವಾ ಗ್ರಾಮೀಣ ಆರ್ಥಿಕತೆಯ ಮೇಲೆ ಏನಾದರೂ ವ್ಯತಿರಿಕ್ತ ಪರಿಣಾಮ ಬೀರುವುದೇ ಎಂಬ ಪ್ರಶ್ನೆಗೆ ಅವರ ಈ ನೈಜ ಉತ್ತರ ಸಭಿಕರಿಂದ ಕರತಾಡನ ಪಡೆಯಿತು.
‘‘ಸಮಾಜದಲ್ಲುಂಟಾಗುವ ಬಿರುಕುಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆಂಬುದು ಆರ್ಥಿಕ ಅಭಿವೃದ್ಧಿಯ ಮೇಲೆ ಗಂಭೀರ ಪರಿಣಾಮ ಬೀರುವುದು, ಭಾರತ ಇದಕ್ಕೆ ಒಂದು ಉತ್ತಮ ಉದಾಹರಣೆ. ಮೀಸಲಾತಿ ಏನು ಮಾಡಿದೆ, ಏನು ಮಾಡಿಲ್ಲ, ಧರ್ಮ ಏನು ಮಾಡಿದೆ, ಏನು ಮಾಡಿಲ್ಲವೆಂಬ ಅಂಶಗಳು ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುವುದೆಂಬುದನ್ನು ಸೂಚಿಸುತ್ತದೆ,’’ ಎಂದು ಪೀಟರ್ಸನ್ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್‌ನ್ಯಾಶನಲ್ ಇಕನಾಮಿಕ್ಸ್, ವಾಷಿಂಗ್ಟನ್‌ನಿಂದ ಅಕ್ಟೋಬರ್, 2014ರಿಂದ ರಜೆಯಲ್ಲಿರುವ ಸುಬ್ರಹ್ಮಣ್ಯನ್ ಅಭಿಪ್ರಾಯಪಟ್ಟರು.





